Loading Events
  • This event has passed.

೩೦-೫-೧೯೦೭ ೧೯೭೭ ನಿಸ್ವಾರ್ಥ, ನಿಶ್ಯಬ್ದ, ನುಡಿಸೇವಕ ನರೇಗಲ್ಲ ಪ್ರಹ್ಲಾದರಾಯರು ಹುಟ್ಟಿದ್ದು ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ. ತಂದೆ ಅನಂತರಾವ ನರೇಗಲ್ಲ, ತಾಯಿ ಅಂಬಾಬಾಯಿ. ಪ್ರಾಥಮಿಕದಿಂದ ಹಿಡಿದು ಬಿ.ಎ.ವರೆವಿಗೂ ಧಾರವಾಡದಲ್ಲಿ ವಿದ್ಯಾಭ್ಯಾಸ. ಶಿಕ್ಷಣದೊಂದಿಗೆ ಸಂಪಾದನೆಯ ಹಾದಿ ಹಿಡಿದಿದ್ದ ಪ್ರಹ್ಲಾದರು ಕರ್ಮವೀರ ಕಾರ‍್ಯಾಲಯದಲ್ಲಿ ಕೆಲಕಾಲ ಕಂಪೋಜಿಟರಾಗಿ, ಉಪಸಂಪಾದಕರಾಗಿ ವೃತ್ತಿ ಆರಂಭ. ‘ವಾರ್ತಾಹರ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ  ಕೆಲಕಾಲ. ವಿಕ್ಟೋರಿಯ ಹೈಸ್ಕೂಲಿನಲ್ಲಿದ್ದಾಗಲೇ ಬೇಂದ್ರೆ, ಜೋಶಿ, ಗೋವಿಂದರಾವ್ ಚುಳಕಿ, ಕಲ್ಲೂರ, ಸಂಗಮ ಮುಂತಾದವರೊಡನೆ ಸ್ನೇಹ. ಹದಿಮೂರರ ವಯಸ್ಸಿನಲ್ಲೇ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿ ವಿದ್ಯೆಗೆ ಶರಣು ಹೊಡೆದರು. ಬೇಂದ್ರೆಯವರ ಉತ್ತೇಜನದ ಮೇರೆಗೆ. ರವೀಂದ್ರರ ಶಾಂತಿನಿಕೇತನ ಸೇರಿ ವಿಶ್ವಭಾರತಿಯಲ್ಲಿ ಪದವಿ ಪಡೆದರು. ಪದವಿ ಪಡೆದ ನಂತರ ಕೆಲಕಾಲ ಜಯ ಕರ್ನಾಟಕ ಪತ್ರಿಕೆಯ ಸಂಪಾದಕತ್ವ. ಚೇಂಬರ್ ಆಫ್ ಕಾಮರ್ಸ್ (ಹುಬ್ಬಳ್ಳಿ) ಕಾರ‍್ಯದರ್ಶಿ, ಕರ್ನಾಟಕ ಏಕೀಕರಣದ ಕಾರ‍್ಯದಲ್ಲೂ  ಭಾಗಿ. ನಂತರ ಉದ್ಯೋಗ ಗಳಿಸಿಕೊಂಡದ್ದು ವಿಜಾಪುರದ ವಿ.ಡಿ. ದರಬಾರ ಹೈಸ್ಕೂಲಿನಲ್ಲಿ  ಶಿಕ್ಷಕರಾಗಿ ಕೆಲಕಾಲ. ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ  ಶಿಕ್ಷಕರಾಗಿ ಸೇರಿದ ನಂತರ ಎಂ.ಎ. ಪದವಿಯನ್ನು  ಸಾಂಗ್ಲಿಯಲ್ಲೂ, ಬಿ.ಟಿ. ಪದವಿಯನ್ನು ಮುಂಬಯಿಯಲ್ಲೂ  ಪಡೆದರು. ಬಂಗಾಲಿ ಕಲಿತ ಇವರು ಗೀತಾಂಜಲಿಯ ಅನುವಾದ ಕಾರ‍್ಯದಲ್ಲಿ ಭಾಗವಹಿಸಿ ೧೫೭ ಗೀತೆಗಳನ್ನು ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡು ಸುಶ್ರಾವ್ಯ ಕಂಠದಿಂದ ಹಾಡಿ, ಸಭಿಕರ ಮನ ಗೆಲ್ಲುತ್ತಿದ್ದುದು ವಿಶೇಷ. ಚಿಕ್ಕಂದಿನಿಂದಲೂ ಕಾವ್ಯದ ಹುಚ್ಚು. ವಿದ್ಯಾರ್ಥಿಯಾಗಿದ್ದಾಗಲೇ ‘ಜೇನುಹುಟ್ಟು’ ಮತ್ತು ‘ಕಾವ್ಯಸೇವೆ’ಗಳ ಸಂಪಾದಕರಾಗಿದ್ದರು. ಇವರ ಮೊದಲ ಕವನ ಸಂಕಲನ ‘ನಸುಕು’ ಪ್ರಕಟವಾದುದು ೧೯೪೬ರಲ್ಲಿ. ‘ಸಂಧ್ಯಾ ನಮನ’ ಅವರ ಇನ್ನೊಂದು ಕವನ ಸಂಕಲನ. ‘ಪ್ರಬಂಧ ಪುಷ್ಪಾಂಜಲಿ’ ೧೯೪೮ರಲ್ಲಿ ಪ್ರಕಟಿತ. ೧೯೫೨ರಲ್ಲಿ ಮಹಾಯೋಗಿ ಕನ್ನಡಕ್ಕೆ ಅನುವಾದಿಸಿದ ಕೃತಿ. ‘ಜ್ಞಾನೇಶ್ವರಿ ಸುಬೋನಿ’ ಕನ್ನಡಕ್ಕೆ ಭಾಷಾಂತರ. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ‘ಈಶ್ವರ ಚಂದ್ರ ವಿದ್ಯಾಸಾಗರ’ ಕನ್ನಡ ಆವೃತ್ತಿ ಪ್ರಕಟಿತ. ಮೈಸೂರು ದಸರಾ ಕವಿಗೋಷ್ಠಿಯಲ್ಲಿ  ಭಾಗಿ. ಅರವಿಂದರ ಜನ ಶತಾಬ್ಧಿಗಾಗಿ ಅರವಿಂದ ಕರ್ಮಧಾರ ಪತ್ರಿಕೆಯ ಸಂಪಾದಕ, ಗ್ರಂಥ ಪ್ರಕಟಣೆಯ ಹೊಣೆಗಾರಿಕೆ. ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಹುಟ್ಟಿದ ಜಾವೂರಿನಲ್ಲಿ, ಲಕ್ಷ್ಮೇಶ್ವರದಲ್ಲಿ, ಹುಬ್ಬಳ್ಳಿಯಲ್ಲಿ  ಸನ್ಮಾನ, ಸತ್ಕಾರ ಸಮಾರಂಭಗಳು. ನರೇಗಲ್ಲ ಮಾಸ್ತರ ಎಂದೇ ಪ್ರಸಿದ್ಧರಾಗಿದ್ದ  ಪ್ರಹ್ಲಾದರಾಯರು ನಿಧನರಾದದ್ದು ೧೯೭೭ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ. ಕುಶಾಲಪ್ಪಗೌಡ – ೧೯೩೧ ಪ್ರಧಾನ ಗುರುದತ್ – ೧೯೩೮ ಮ.ನ. ಜವರಯ್ಯ – ೧೯೪೬ ಕಾ.ತ. ಚಿಕ್ಕಣ್ಣ – ೧೯೫೨