Loading Events

೭-೧೨-೧೯೪೫ ಚಿತ್ರಕಲಾವಿದ, ಸಾಹಿತಿ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್.ಆಚಾರ‍್ಯ ರವರು ಹುಟ್ಟಿದ್ದು ಉಡುಪಿಯಲ್ಲಿ. ತಂದೆ ಪಿ. ವಿಠಲಾಚಾರ‍್ಯ, ತಾಯಿ ರುಕ್ಮಿಣಿ. ಪ್ರಾರಂಭಿಕ ಶಿಕ್ಷಣ ಉಡುಪಿಯ ಬೋರ್ಡ್ ಹೈಸ್ಕೂಲು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. (ಸಂಸ್ಕೃತ) ಪದವಿ. ಹಿಂದಿ ಭಾಷೆಯಲ್ಲಿ ರತ್ನ ಪರೀಕ್ಷೆ. ಎಸ್.ಎಸ್.ಎಲ್.ಸಿ. ಪಾಸಾಗುತ್ತಿದ್ದಂತೆ ಜೀವನದ ಸಾರ್ಥಕ್ಯದ ಹುಡುಕಾಟದಲ್ಲಿ ಆಯ್ದುಕೊಂಡದ್ದು ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಸ್ವಾಮೀಜಿಯ ಪಟ್ಟ . ಜಡ್ಡು ಕಟ್ಟಿದ ಸಂಪ್ರದಾಯಕ್ಕೆ ಶರಣು ಹೊಡೆದು ಪೀಠ ತ್ಯಾಗ ಮಾಡಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಆಯ್ಕೆ. ಚಿತ್ರಕಲೆ, ಸಾಹಿತ್ಯ, ಪ್ರೀತಿಯ ಪ್ರಕಾರಗಳು. ಗುರುವಿಲ್ಲದೆ ಗೆರೆ ಎಳೆದು ಚಿತ್ರಕಲೆಯನ್ನು ಸಾಸಿದರು. ಮನೋಹರ ಗ್ರಂಥಮಾಲೆಯ ಹಲವಾರು ಕೃತಿಗಳ ರಕ್ಷಾಪುಟದ ಕಲೆಯ ರಚನೆ. ಧಾರವಾಡವನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡ ಆಯ್ಕೆ. ಇವರ ಚಿತ್ರಕಲೆಯ ಏಕವ್ಯಕ್ತಿ ಪ್ರದರ್ಶನಗಳು ಮಂಗಳೂರು, ಬೆಂಗಳೂರು, ಮುಂಬಯಿ, ಜರ್ಮನಿ (೩ ಬಾರಿ), ಇಟಲಿ (೪ ಬಾರಿ) ಪ್ಯಾರಿಸ್ (೩ ಬಾರಿ) ನೆದರ್ ಲ್ಯಾಂಡ್ ಮತ್ತು ಫಿನ್ಲೆಂಡ್‌ಗಳಲ್ಲಿ. ಇತರರೊಡನೆಯೂ ಮುಂಬಯಿ, ಜರ್ಮನಿ, ಬೆಂಗಳೂರಿನಲ್ಲಿ ಹಲವಾರು ಬಾರಿ ಕಲಾ ಪ್ರದರ್ಶನಗಳು. ಕಲೆಯ ಜೊತೆಗೆ ಸಾಸಿದ್ದು ಸಾಹಿತ್ಯ ರಚನೆ. ಹಲವಾರು ಕೃತಿಗಳು ಪ್ರಕಟಿತ. ಕಥಾಸಂಕಲನಗಳು-ದ್ರಷ್ಟ್ರ, ದೇಶಿ ಪರದೇಶಿ ಕಥೆಗಳು, ಹೈಬ್ರಿಡ್ ಕಥೆಗಳು, ಕರುಣೆ ಏಕಾಂತ. ಕಾದಂಬರಿ-ಗುರು. ಕಾವ್ಯ-ಮನುಷ್ಯ, “Oh Master and other Poems”. ಮಕ್ಕಳ ಸಾಹಿತ್ಯ-ಕೊಕ್ಕರೆ ತಾತ (ಕಥೆಗಳು), ಮೋಡರಾಜ, ಕುರಿ ಕೊಂದ ಕುಮಾರ, ಮಳೆ ಬಂತು ಮಳೆ. ನಾಟಕಗಳು-ಭ್ರೂಣ, ಪಾತಾಳ ಗರಡಿ, ಯಜ್ಞ, ಬಯಲು ಆಲಯದೊಳಗೇ, ಇಲ್ಲದಿದ್ದವರು. ಅನೇಕ ಸಂಘ ಸಂಸ್ಥೆಗಳೊಡನಾಟ. ಕಲಾ ಮಂಡಲದ ಅಧ್ಯಕ್ಷರಾಗಿ, ವಿದ್ಯಾ ಮೆಡಿಕಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ. ಕಲೆ ಮತ್ತು ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಜಿ.ಎಸ್.ಶೆಣೈ ಪ್ರಶಸ್ತಿ, ಹಲವಾರು ಸಾಕ್ಷ್ಯ ಚಿತ್ರಗಳ ತಯಾರಿಕೆ, ಕಿತಾಪತಿ ಚಲನಚಿತ್ರ ನಿರ್ದೇಶನಕ್ಕಾಗಿ ಸಂದ ಪ್ರಶಸ್ತಿ. ಹಿತೈಷಿಗಳು ಅರ್ಪಿಸಿದ ಷಷ್ಟಬ್ದಿ ಗ್ರಂಥ ಆರ್ಯಾವರ್ತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಇಂದಿರಾಕೃಷ್ಣ – ೧೯೩೫ ಕೆ.ಎಂ. ರಾಘವ ನಂಬಿಯಾರ್ – ೧೯೪೬