Loading Events
  • This event has passed.

೧೪-೧-೧೯೨೧ ಕನ್ನಡ ನಾಡಿಗೆ ಕೀರ್ತಿ ತಂದವರು ಪುಟ್ಟಪ್ಪ ದ್ವಯರು. ಸಾಹಿತ್ಯ ಲೋಕಕ್ಕೆ ಕುವೆಂಪು. ಪರ್ತಕರ್ತರಾಗಿ ಪ್ರಪಂಚ ಖ್ಯಾತಿಯ ಪಾಟೀಲ ಪುಟ್ಟಪ್ಪ. ಪಾ.ಪುರವರು ಹುಟ್ಟಿದ್ದು ಹಾವೇರಿ ತಾಲ್ಲೂಕಿನ ಕುರುಬಗೊಂಡ ಹಳ್ಳಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದ ಊರು ಮತ್ತು ಹಾವೇರಿ. ಲಿಂಗರಾಜ ಕಾಲೇಜ ಸೇರಿ ಕಾನೂನು ಪದವಿ. ಬಿಜಾಪುರದಲ್ಲಿ ವಕೀಲ ವೃತ್ತಿ ಆರಂಭ. ಕಕ್ಷಿಗಾರರಿಲ್ಲದೆ ಸಂಪಾದನೆ ಖೋತ. ಊಟಕ್ಕೂ ತತ್ವಾರ. ಉದ್ಯೋಗಕ್ಕಾಗಿ ಮುಂಬೈಗೆ ಪಯಣ. ಕೋರ್ಟಿಗಿಂತ ಪತ್ರಿಕಾ ಕಚೇರಿಗಳಿಗೆ ಹೋದದ್ದೇ ಹೆಚ್ಚು. ಫ್ರೀ ಪ್ರೆಸ್ ಜರ್ನಲ್‌ದ ಸದಾನಂದ, ಬಾಂಬೆ ಕ್ರಾನಿಕಲ್ ಪತ್ರಿಕೆಯು ಸೈಯದ್ ಅಬ್ದುಲ್ಲಾ ಮತ್ತು ಎ.ಜಿ.ತೆಂಡೂಲ್ಕರ್ ಸ್ನೇಹ, ಪತ್ರಿಕೋದ್ಯಮದ ಹುಚ್ಚು. ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದ ಎಂ.ಎಸ್‌ಸಿ. ಗಳಿಸಿ ಹಿಂದಿರುಗಿ ಬಂದು ಪತ್ರಿಕಾರಂಗ ಪ್ರವೇಶ. ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ. ಮೊನಚಿನ ಬರಹಕ್ಕೆ ಬೆರಗಾಗಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪದವಿ. ಯಾವುದೇ ಕಚೇರಿ ನೇರಪ್ರವೇಶ, ಕನ್ನಡ ಬಳಕೆಗೆ ಆಗ್ರಹ. ಕನ್ನಡ ದುರವಸ್ಥೆ ಕಂಡು ಖಂಡನೆ. ಅಕಾರಿಗಳಿಗೆ ಚಾಟಿ ಪ್ರಹಾರ. ಕನ್ನಡಕ್ಕೆ ಗಳಿಸಿಕೊಟ್ಟ ಸ್ಥಾನಮಾನ. ಚರಿತ್ರಾರ್ಹ ಕಾರ‍್ಯ ಸಾಧನೆ. ಹಲವಾರು ಸಾಹಿತ್ಯ ಕೃತಿಗಳ ರಚನೆ. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು-ಕಥಾಸಂಕಲನಗಳು ; ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ; ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು-ಪ್ರಬಂಧ ಸಂಕಲನಗಳು ಮುಖ್ಯವಾದುವು. ಅರಸಿಬಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವು. ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಕುಂದಾನಿ ಸತ್ಯನ್ – ೧೯೩೦ ಕಾಡಣ್ಣ ಹೊಸಟ್ಟಿ – ೧೯೪೪ ವೈ.ಸಿ. ಭಾನುಮತಿ – ೧೯೫೩ ಸಾ.ಕೃ. ಪ್ರಕಾಶ್ – ೧೯೪೬-೨೩.೧.೨೦೦೩