Loading Events
  • This event has passed.

೦೬.೦೬.೧೯೩೭ ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ, ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ ಬರ್ಟ್ ಡಿಸೋಜರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲನ ಪದ್ಯಗಳನ್ನು ಕಲಿಯುವುದರ ಮೂಲಕ ಇವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು – ಕಥೆಗಳು ಡಿಸೋಜರ ಮನಸ್ಸಿನ ಮೇಲೆ ನೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ‍್ಯರು. ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ ಮಾತ್ರ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳ ವ್ಯಾಪಕ ಓದು. ಮೈಸೂರಿನಲ್ಲಿದ್ದಾಗ ಕಲಿತದ್ದು ಟೈಪಿಂಗ್ ಹಾಗೂ ಶಾರ್ಟ್‌ಹ್ಯಾಂಡ್. ಈ ಸಂದರ್ಭದಲ್ಲಿ ಪ್ರಪಂಚ ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು. ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ. ಇವರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು ೧೯೬೪ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು ೪೦. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ‘ಮುಳುಗಡೆ’ ಕಾದಂಬರಿಯು ಸುಧಾ ಉಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ‘ಬೆಟ್ಟದ ಪುರದ ದಿಟ್ಟ ಮಕ್ಕಳು’ ಮತ್ತು ಮನುರವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ. ‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’, ಈ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದನ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ. ಟಿ.ವಿ. ಮಾಧ್ಯದಲ್ಲಿ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ. ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳ ೯ ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳ ೨ ಸಂಪುಟಗಳಲ್ಲಿ ಪ್ರಕಟವಾಗಿವೆ. ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೇ. ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ, ಪಿತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ ಮತ್ತು ಬಾಲಗಂಧರ್ವ, ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್‌ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ. ನಾ.ಡಿಸೋಜರವರ ಸಾಹಿತ್ಯ ಕುರಿತು ಮದರಾಸು ವಿಶ್ವವಿದ್ಯಾಲಯದ ಶ್ರೀ ಪ್ರಕಾಶ್ ಸೈಮನ್‌ರವರು ‘ನಾ. ಡಿಸೋಜರವರ ೨೫ ಕಥೆಗಳು ಒಂದು ಅಧ್ಯಯನ’ ಕುರಿತು ಎಂ.ಫಿಲ್. ಪದವಿ (೧೯೯೫), ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಎಂ.ಎಂ. ಮಂಜುನಾಥರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮೆಸ್ಯ – ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಎಂ.ಫಿಲ್. ಪದವಿ (೧೯೯೮), ಕುವೆಂಪು ವಿಶ್ವವಿದ್ಯಾಯದ ಟಿ.ಎಸ್. ಶೈಲಾರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಮಹಾ ಪ್ರಬಂಧಕೆಕ್ಕ ಎಂ.ಫಿಲ್ ಪದವಿ (೨೦೦೧) ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಂಗಾ ಮೂಲಿಮನಿಯವರು ‘ನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ (೨೦೦೧) ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್, ಕುವೆಂಪು ರಂಗ ಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ (೧೯೮೮), ಗುಲ್ವಾಡಿ ವೆಂಕಟಾವ್ ಪ್ರಶಸ್ತಿ (೧೯೮೮), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೩), ಸಂದೇಶ್ ಸಾಹಿತ್ಯ ಪ್ರಶಸ್ತಿ (೧೯೯೮), ನಿರಂಜನ ಸಾಹಿತ್ಯ ಪ್ರಶಸ್ತಿ (೨೦೦೩), ಆಳ್ವಾಸ್ ನುಡಿಸಿರಿ ಪ್ರಶಸ್ತಿ (೨೦೦೬), ವರ್ಧಮಾನ ಪ್ರಶಸ್ತಿ (೨೦೦೬), ಚಿತ್ರದುರ್ಗದ ಬೃಹನ್ಮಠದಿಂದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ (೨೦೧೧), ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾ (೨೦೧೧), ಮಾಸ್ತಿ ಪ್ರಶಸ್ತಿ (೨೦೧೨), ಭಟ್ಕಳ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (೨೦೦೬), ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ (೨೦೦೬), ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮), ಮತ್ತು ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (೨೦೦೭) ಮುಂತಾದ ಗೌರವ, ಪ್ರಶಸ್ತಿಗಳಿಗೆ ಪ್ರಾತರಾಗಿರುವ ನಾ. ಡಿಸೋಜರವರಿಗೆ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಾ. ಡಿಸೋಜ’ (೧೯೯೩).