Loading Events

೩-೧೧-೧೯೩೯ ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲೂ ವಿಶಿಷ್ಟ ಸ್ಥಾನ ಗಳಿಸಿರುವ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಹುಟ್ಟಿದ್ದು ‘ಯಾದವಾಡ’ ಗ್ರಾಮ. ತಂದೆ ಬಸೆಟ್ಟಪ್ಪ, ತಾಯಿ ಗಿರಿಜವ್ವ. ಪ್ರಾರಂಭಿಕ ಶಿಕ್ಷಣ ಮನಗಂಡಿ, ಬಾಸೆಲ್ ಮಿಷನ್ ಹೈಸ್ಕೂಲು. ಹೈಸ್ಕೂಲಿನಲ್ಲಿ ಹಿಂದಿ ಫೇಲಾದಾಗ ಹಿಂದಿ ಕಲಿಯಬೇಕೆಂಬ ಛಲ. ಹಿಂದಿ ಶಿಕ್ಷಕ್ ಸನದ್‌ನಲ್ಲಿ ಮುಂಬಯಿ ರಾಜ್ಯಕ್ಕೆ ಮೊದಲಿಗರಾಗಿ ಪಾಸಾದ ಹೆಗ್ಗಳಿಕೆ (೧೯೫೮). ದೊರೆತ ಗೌರ‍್ನಮೆಂಟ್ ಮೆರಿಟ್ ಸ್ಕಾಲರ್‌ಶಿಪ್. ಮಕ್ಕಳಿಗೆ ಪಾಠ ಹೇಳಿಕೊಡುತ್ತಾ, ತಾವೂ ಕಲಿಯುತ್ತಾ ಪಡೆದ ಬಿ.ಎ. (ಆನರ್ಸ್) ಪದವಿ, ಎಂ.ಎ. ಪ್ರಥಮ ಶ್ರೇಣಿ. “ಮೋಹನ್ ರಾಕೇಶ್ ಔರ್ ಗಿರೀಶ್ ಕಾರ್ನಾಡ್ ನಾಟಕ್ : ಏಕ್ ತುಲನಾತ್ಮಕ್ ಅಧ್ಯಯನ್” ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಅಧ್ಯಾಪಕರಾಗಿ ಸೇರಿದ್ದು (೧೯೬೫) ಸಿರ್ಸಿ ಕಾಲೇಜಿನಲ್ಲಿ. ನಂತರ ಧಾರವಾಡದ ಕರ್ನಾಟಕ ಕಲಾ ಮಹಾ ವಿದ್ಯಾಲಯದಲ್ಲಿ ಹಿಂದಿ ಅಧ್ಯಾಪಕರಾಗಿ, ರೀಡರ್ ಆಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರೊಫೆಸರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಸಾಹಿತ್ಯ ರಚನೆ, ಸಂಘಟಿತ ಸಾಹಿತ್ಯ ಕಾರ‍್ಯಕ್ರಮಗಳ ಕಡೆ ಮೊದಲ ಒಲವು. ಸಂಕ್ರಮಣ ಪತ್ರಿಕೆ ಆರಂಭಿಸಿದ್ದು ಗಿರಡ್ಡಿ ಹಾಗೂ ಚಂಪಾರೊಡನೆ. ನಂತರ ಅರವಿಂದ ನಾಡಕರ್ಣಿ, ಹೇಮಂತ ಕುಲಕರ್ಣಿಯವರೊಡನೆ ಪ್ರಾರಂಭಿಸಿದ್ದು ಸೃಜನವೇದಿ. ಅಂತರಂಗ ನಾಟಕ ಕೂಟದ ಸ್ಥಾಪಕ ಸದಸ್ಯ, ಕಾರ‍್ಯದರ್ಶಿ. ಹಲವಾರು ಕೃತಿಗಳ ರಚನೆ. ಕಥಾಸಂಕಲನ-ಮಾವ ಮತ್ತು ಇತರ ಕಥೆಗಳು, ಹಕ್ಕಿಗಳು. ಕಾವ್ಯ-ನೀನಾ, ಔರಂಗಜೇಬ ಮತ್ತು ಇತರ ಕವನಗಳು, ಪರದೇಶಿ ಹಾಡುಗಳು, ನೂರಾರು ಪದ್ಯಗಳು, ಪ್ರತೀಕ್ಷೆ, ಮತ್ತೆ ಬಂದಿದ್ದಾಳೆ, ಆಯ್ದಕವನಗಳು, ಇಂದು ರಾತ್ರಿಯ ಹಾಗೆ, ಅಂತರಂಗದ ಕವನಗಳು, ಇಷ್ಟು ಹೇಳಿದ ಮೇಲೆ, ಸಮಗ್ರ ಕಾವ್ಯ. ವಿಮರ್ಶೆ-ಆಧುನಿಕ ಕನ್ನಡ, ಹಿಂದಿ ಕಾವ್ಯ, ಅನುಶೀಲನ, ರಂಗಾಯಣ, ಪರಿಭಾವನ, ಅನುಸ್ವಾದನ. ವ್ಯಕ್ತಿಚಿತ್ರ-ಸಂದರ್ಶನ, ಋಣಾನುಬಂಧ. ಜೀವನಚರಿತ್ರೆ-ಧರ್ಮಸ್ಥಳ, ಹಳ್ಳಿ ಕೇರಿ ಗುದ್ಲೆಪ್ಪನವರು. ಅಂಕಣಬರಹ-‘ಚಹಾದ ಜೋಡಿ…’ ಐದು ಸಂಪುಟಗಳಲ್ಲಿ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಕೆ.ವಿ. ಸುಬ್ಬಣ್ಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು. ೨೦೦೬ರಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಸಹೃದಯಿ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ.ಎನ್. ನಾಣಿ – ೧೯೨೯-೪.೧೨.೦೩ ಭಾಲಚಂದ್ರ ಘಾಣೇಕರ್ – ೧೯೧೦ ಪದ್ಮಾ ಶೆಣೈ – ೧೯೩೩ ಅಂದನೂರು ಶೋಭ – ೧೯೪೯ ಚಂದ್ರಿಕಾ ಕಾಕೋಳ್ – ೧೯೬೮