Loading Events
  • This event has passed.

೦೨.೦೬.೧೯೬೭ ಪ್ರಗತಿಶೀಲ ಧೋರಣೆಯ ಜೊತೆಗೆ ತಮ್ಮ ಅಸ್ತಂಗತ ವಿಚಾರಗಳನ್ನು ಬಿಂಬಿಸಲು ಆಯ್ದುಕೊಂಡ ಮಾಧ್ಯಮ ಚಿತ್ರಕಲೆ ಎನ್ನುವ ಶಿವಾನಂದರು ಹುಟ್ಟಿದ್ದು ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ. ತಂದೆ ಹನುಮಂತರಾಯ, ತಾಯಿ ಶಾಂತಾಬಾಯಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ, ಪೇಯಿಂಟಿಂಗ್ಸ್‌ನಲ್ಲಿ ಡಿಪ್ಲೊಮ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಫೈನ್‌ಆರ್ಟ್ಸ್‌. ಹಂಪಿ ವಿಶ್ವವಿದ್ಯಾಲಯಕ್ಕೆ ’ಕರ್ನಾಟಕದಲ್ಲಿ ಜನಪದ ಶಿಲ್ಪ’ ಮಹಾಪ್ರಬಂಧ ಮಂಡಿಸಿ ಪಡೆದ ಡಾಕ್ಟರೇಟ್ ಪದವಿ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಗಾಂಧಿ, ಅಕ್ಬರ್‌, ಶಿವಾಜಿ ಚಿತ್ರಗಳನ್ನು ನೋಡಿ ತಾವೂ ಅದೇ ರೀತಿ ಬರೆದು ಸಹಪಾಠಿಗಳಿಂದ ಪಡೆದ ಮೆಚ್ಚುಗೆ. ಮರ, ಶಿಲ್ಪ, ಚಿತ್ರ ಮೂರರಲ್ಲೂ ಕಲಾಕೃತಿ ರಚನೆಯಲ್ಲಿ ಗಳಿಸಿದ ಖ್ಯಾತಿ. ಕರ್ನಾಟಕ ವಿಶ್ವವಿದ್ಯಾಲಯ- ಧಾರವಾಡ, ಕರ್ನಾಟಕ ವಿದ್ಯಾವರ್ಧಕ ಸಂಘ, ಗದಗಿನ ವಿಜಯ ಕಲಾ ಮಂದಿರ, ಅಂತಾರಾಷ್ಟ್ರೀಯ ಶಿಲಾಮೇಳ ಮುಂತಾದೆಡೆ ನೀಡಿದ ಏಕವ್ಯಕ್ತಿ ಪ್ರದರ್ಶನ. ಧಾರವಾಡ, ಡೆಂಪೆ ಕಾಲೇಜು-ಪಣಜಿ, ಕಾಮರಾಜ ವಿಶ್ವವಿದ್ಯಾಲಯ, ಮಧುರೈ, ತಿರುಚರಾಪಳ್ಳಿ, ಬಿಜಾಪುರ, ಪೂನ, ಬೆಂಗಳೂರು, ಕಾಸರಗೋಡು, ಮುಂಬೈ, ದೆಹಲಿ, ಹಂಪಿ ಉತ್ಸವ ಮುಂತಾದೆಡೆ ಸಾಂಘಿಕ ಪ್ರದರ್ಶನಗಳು. ಹಲವಾರು ಚಿತ್ರಕಲಾ ಶಿಬಿರಗಳಲ್ಲಿ ಭಾಗಿ. ಶೋಷಣೆ, ಬಡತನ, ಹಸಿವು, ಸಂಪ್ರದಾಯ, ಪರಂಪರೆಯ ವಿಚಾರಗಳು ಮುಂತಾದುವುಗಳೇ ಇವರ ಶಿಲ್ಪ-ಚಿತ್ರ ರಚನೆಯ ವಸ್ತುಗಳು. ಸೃಜನಶೀಲ ಕೃತಿಗಳೇ ಇವರ ಕಲೆಯ ಜೀವಾಳ. ಹಲವಾರು ಲೇಖನಗಳು, ಕ್ಯಾಟಲಾಗ್ ಬರಹಗಳು, ಪುಸ್ತಕ ವಿಮರ್ಶೆ, ವಿಚಾರ ಮಂಡನೆಯ ಜೊತೆಗೆ ವಿ.ಎಸ್. ಪಾಟೀಲರ ಕುರಿತು ಸೌಜನ್ಯ, ಕಲಾವಿದ ವಿ.ಜಿ. ಅಂದಾನಿ, ದೃಷ್ಟಿ-ಸೃಷ್ಠಿ ಪ್ರಕಟಿತ ಕೃತಿಗಳು. ಅಖಿಲ ಭಾರತ ಲಲಿತ ಕಲಾ ಸಂಸ್ಥೆ- ದೆಹಲಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ, ರಾಜ್ಯ ಶಿಲ್ಪಕಲಾ ಅಕಾಡಮಿ, ಶಾರ್ಜಾ- ಅಂತಾರಾಷ್ಟ್ರೀಯ ಪ್ರದರ್ಶನ ಮುಂತಾದುವುಗಳಲ್ಲಿ ಕಲಾಕೃತಿಗಳ ಆಯ್ಕೆ. ಡಿ.ಎಂ.ಸಿ.ಯಲ್ಲಿ ಪ್ರಥಮ ರ‍್ಯಾಂಕ್ ಪಡೆದದ್ದಕ್ಕೆ ರಾಜ್ಯಪ್ರಶಸ್ತಿ, ಧಾರವಾಡದ ಯುವಜನೋತ್ಸವದಲ್ಲಿ ವೈಯಕ್ತಿಕ ಚಾಂಪಿಯನ್, ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಎಂ. ಎ. ಫೈನ್ ಆರ್ಟ್ಸ್‌ಗೆ ಪ್ರಥಮ ರ‍್ಯಾಂಕ್ ದೊರೆತ ಚಿನ್ನದ ಪದಕ, ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಶಿಲ್ಪ ಕೃತಿ ಪ್ರಶಸ್ತಿ, ಅಂತರ ವಿಶ್ವವಿದ್ಯಾಲಯ ಕ್ಲೇ ಮಾಡಲಿಂಗ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಕೊಲಾಜ್ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು: ಸಿ.ಟಿ. ಶೇಷಾಚಲಂ  – ೧೯೧೧ ಸೀತಾರಾಮಶೆಟ್ಟಿ. ಜಿ. – ೧೯೫೧ ಮಹಾದೇವಪ್ಪ.ಎಂ.ಸಿ. – ೧೯೫೩ ಬಾಲಚಂದ್ರ ನಾಕೋಡ್ – ೧೯೫೭

* * *