Loading Events

೧೨-೧೦-೧೯೩೧ ೧೭-೧೧-೧೯೮೮ ವಾಗ್ಮಿ, ಸಾಹಿತಿ, ನಾಟಕಕಾರರಾದ ವಸಂತ ಕವಲಿಯವರು ಹುಟ್ಟಿದ್ದು ಬ್ಯಾಡಗಿಯಲ್ಲಿ. ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ, ತಾಯಿ ಗೌರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿ. ಉನ್ನತ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಿಂದ. ಕನ್ನಡ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಪದವಿ. ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ. ‘ಬೂರ್ಝ್ವಾ ಟ್ರಾಜೆಡಿ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಕರ್ನಾಟಕ ವಿಶ್ವವಿದ್ಯಾಲಯದಿಂದ. ಉದ್ಯೋಗಕ್ಕಾಗಿ ಹುಡುಕಿಕೊಂಡು ಹೋದದ್ದು ಮುಂಬಯಿಗೆ. ಆಯ್ಕೆ ಮಾಡಿಕೊಂಡದ್ದು ಬೋಧಕ ವೃತ್ತಿ. ಜೈಹಿಂದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ. ಆದರೆ ಅದೇಕೋ ವೃತ್ತಿಗೆ ಶರಣು ಹೊಡೆದು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಯ್ದುಕೊಂಡದ್ದು ಆಕಾಶವಾಣಿಯ ಹುದ್ದೆ. ಬೆಂಗಳೂರು ಆಕಾಶವಾಣಿಯಲ್ಲಿ ಹಲವು ವರ್ಷ. ನಂತರ ಭದ್ರಾವತಿಯ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಚಿಕ್ಕಂದಿನಿಂದಲೂ ಸಾಹಿತ್ಯದತ್ತ ಒಲವು. ತಂದೆ ಪಂಡಿತ ಕವಲಿಯವರಿಂದ ಬಂದ ಬಳುವಳಿ. ಆಕಾಶವಾಣಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಾಟಕ, ಸಾಹಿತ್ಯ ರಚನಕಾರರಾಗಿ ದುಡಿದ ಹಲವಾರು ರಂಗಗಳು. ಸಾಹಿತ್ಯದ ಹಲವಾರು ಕೃತಿಗಳ ರಚನೆ. ಹಲವಾರು ಏಕಾಂಕ ನಾಟಕಗಳು, ಮಕ್ಕಳ ಕೃತಿಗಳು ಪ್ರಕಟಿತ. ಏಕಾಂಕ ನಾಟಕಗಳು-ಅಲಂಕಾರ, ಕಣ್ವ ಕೇಶನ್, ಘನ ಆನಂದ. ಮಕ್ಕಳಿಗಾಗಿ-ತಾನಸೇನ (ವ್ಯಕ್ತಿಚಿತ್ರ). ಮದನಲಾಲ ಂಗರಾ (ಕನ್ನಡದಿಂದ ಇಂಗ್ಲಿಷ್‌ಗೆ). ಅನುವಾದ-ಕನ್ನಡದಲ್ಲಿ ಭಾಸನ ಸ್ವಪ್ನವಾಸವದತ್ತ ನಾಟಕ ‘ಕನಸಿನ ರಾಣಿ.’ ನಗೆನಾಟಕ-ಎನ್ನ ಮುದ್ದಿನ ಮುದ್ದಣ. ರೂಪಕಗಳು- ಧೃತರಾಷ್ಟ್ರೇಯ. ಸಂಕೀರ್ಣ ಕೃತಿ-ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ. ಪ್ರವಾಸ ಸಾಹಿತ್ಯ-ಯೂರೋಪಿನಲ್ಲಿ ಪ್ರವಾಸ ಕೈಗೊಂಡು ಪ್ಯಾರಿಸಿನಲ್ಲಿ ನಡೆಸಿಕೊಟ್ಟ ಸಂಗೀತ ಕಾರ‍್ಯಕ್ರಮ, ಕೃತಿ ರಚನೆ, ‘ರಾಗ-ತಾನ-ಸೇನ ನದಿಯ ದಡದಲ್ಲಿ.’ ಹೀಗೆ ಹಲವಾರು ಕೃತಿಗಳ ರಚನೆ. ಇವರು ನಿರ್ದೇಶಿಸಿದ ನಾಟಕಗಳು ಹಲವಾರು. ಅರಿಶಿನ ಅಳಿಸಬೇಡಮ್ಮ, ಏಕಾಂತದ ಸುಖಕ್ಕೆ ಲೋಕಾಂತವದೇಕೆ, ಶಬ್ದಬ್ರಹ್ಮನ ಶಿರ ಹೋಯಿತ್ತು, ಖಂಡವಿದೆಕೋ ಮಾಂಸವಿದೆಕೋ, ದೂರವಾಣಿ ಕಾರ‍್ಯವೈಖರಿಯ ಬಗ್ಗೆ ವಿಡಂಬನಾತ್ಮಕ ನಾಟಕ ನಂಬರು-ನೆಚ್ಚರು, ಜಗದ್ಗುರು ಬಾದಶಾ ಅಲ್ಲದೆ ಹಲವಾರು ನಾಟಕಗಳಿಗೆ ಶೋತೃಗಳಿಂದ ಬಂದ ಮೆಚ್ಚುಗೆ, ಆಕಾಶವಾಣಿಯ ವಾರ್ಷಿಕ ಪ್ರಶಸ್ತಿಗಳು. ಸಂಸ್ಕೃತ ನಾಟಕಗಳನ್ನು ಸಂಸ್ಕೃತದಲ್ಲೇ ಪ್ರಸಾರ ಮಾಡಿ ವಿದ್ವತ್‌ವಲಯದಿಂದ ಪಡೆದ ಪ್ರಶಂಸೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಯಾರಾಜಶೇಖರ್ – ೧೯೩೩ ಯಶೋಧಾ ಜೆನ್ನಿ – ೧೯೩೬