Loading Events

೧೦.೦೮.೧೯೪೯ ಪ್ರಖ್ಯಾತ ನಾಟಕಕಾರ, ವೈಚಾರಿಕ ಲೇಖನಗಳ ಬರಹಗಾರರಾದ ಬಸವರಾಜ ಮಲಶೆಟ್ಟಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ. ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಚಿಕ್ಕಂದಿನಿಂದಲೂ ರಂಗಭೂಮಿಯ ಸಂಪರ್ಕ, ತಂದೆಯವರ ನೇತೃತ್ವದ ಬಯಲಾಟಗಳ ಪಾತ್ರಧಾರಿ. ಬೆಳೆದ ಆಸಕ್ತಿಯಿಂದ “ಉತ್ತರ ಕರ್ನಾಟಕದ ಬಯಲಾಟಗಳು” ಮಹಾಪ್ರಬಂಧ ಮಂಡಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ವೃತ್ತಿರಂಗಭೂಮಿ, ಬಯಲಾಟ, ಹವ್ಯಾಸಿ ನಾಟಕ ರಂಗಭೂಮಿಗಳಿಗೆ ತಂದ ಸಾಮರಸ್ಯ. ರಂಗಭೂಮಿಯ ನಟರಾಗಿ, ನಿರ್ದೇಶಕರಾಗಿ ಹಲವಾರು ನಾಟಕಗಳ ಪ್ರದರ್ಶನ. ಗಿರಿಜಾಕಲ್ಯಾಣ ಪರಿಷ್ಕೃತ ದೊಡ್ಡಾಟದ ಲೇಖಕ, ನಿರ್ಮಾಪಕ, ನಿರ್ದೇಶಕರ ಜವಾಬ್ದಾರಿ. ದಿಲ್ಲಿ, ಮುಂಬಯಿ, ಬೆಂಗಳೂರು ಮುಂತಾದ ನಗರಗಳಲ್ಲಿ, ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರದರ್ಶಿಸಿ ಪಡೆದ ಮೆಚ್ಚುಗೆ. ಹಲವಾರು ನಾಟಕಗಳ ಸಂಗೀತ ಸಂಯೋಜಕರು. ಹೊಸಪೇಟೆಯ ನಾಟಕಚಳುವಳಿಯಲ್ಲಿ ಭಾಗಿಯಾಗಿ ನಾಟಕೋತ್ಸವ, ವಿಚಾರ ಸಂಕಿರಣಗಳ ರೂವಾರಿ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ. ಕರ್ನಾಟಕ ನಾಟಕ ಅಕಾಡಮಿ, ಜಾನಪದ ಪರಿಷತ್‌, ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ – ನಾಗಪುರ, ಉಡುಪಿಯ ರಂಗ ಕಲೆಗಳ ಅಧ್ಯಯನ ಕೇಂದ್ರ ಮುಂತಾದುವುಗಳ ಸದಸ್ಯತ್ವ. ಉತ್ತರ ಕರ್ನಾಟಕದ ರಂಗಗೀತೆಗಳು, ಜನಪದ ವಾದ್ಯಗಳು ಸೇರಿ ಸುಮಾರು ಮೂವತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳು ಪ್ರಕಟಿತ. ಕರ್ನಾಟಕ ರಾಜ್ಯ ಜೆ.ಸಿ. ಯುವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಜಾನಪದ ತಜ್ಞ ಪ್ರಶಸ್ತಿ, ಜಾನಪದ ಪರಿಷತ್ತಿನ ವಿಶೇಷ ಪುರಸ್ಕಾರ, ಕಾವ್ಯಾನಂದ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ. ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ನಟೇಶ್‌ ಕೆ. – ೧೯೩೨ ವಾಸುದೇವರಾಜ್‌ ಉಭಾಳೆ – ೧೯೩೫ ಜಯಮುನಿರಾವ್‌ ಮೋಹಿತೆ – ೧೯೩೫ ರಮೇಶ್‌ ಎಂ.ಎಸ್‌ – ೧೯೪೮ ಸಹನಾ ಪ್ರದೀಪ್‌ ಭಟ್ಟ. – ೧೯೭೭

* * *