Loading Events

.೧೨.೧೯೪೬ ಯಕ್ಷಗಾನದ ತೆಂಕು, ಬಡಗುತಿಟ್ಟುಗಳು ಬಗ್ಗೆ ಅಧಿಕೃತ ವಕ್ತಾರರೆನಿಸಿರುವ ರಾಘವ ನಂಬಿಯಾರ್‌ರವರು ಹುಟ್ಟಿದ್ದು ಕೇರಳದ ಕಣ್ಣಾನೂರಿನ ಬಳಿಯ ರಾಮಂತಳಿಯಲ್ಲಿ. ತಂದೆ ಶ್ರೀಕಂಠ ಪಂಡಿತರು, ತಾಯಿ ಪಾರ್ವ ಅಮ್ಮ. ಹುಟ್ಟಿದ್ದು ಕೇರಳದಲ್ಲಾದರೂ ಬೆಳೆದದ್ದೆಲ್ಲಾ ಕರ್ನಾಟಕದಲ್ಲೇ. ಕಾರ್ಕಳದ ಪ್ರಾಥಮಿಕ ಶಾಲೆ, ಭುವನೇಂದ್ರ ಹೈಸ್ಕೂಲು, ಭುವನೇಂದ್ರ ಕಾಲೇಜುಗಳಲ್ಲಿ ಇವರ ವಿಧ್ಯಾಭ್ಯಾಸ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ. ಪದವೀಧರರು. “ಕರಾವಳಿಯ ಯಕ್ಷಗಾನದ ಹಿಮ್ಮೇಳ; ಒಂದು ಸಮಗ್ರ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ೧೯೭೧ ರಿಂದ ೨೦೦೧ ರವರೆಗೆ ಉದ್ಯೋಗಕ್ಕಾಗಿ ಪತ್ರಿಕೋದ್ಯಮ ಕ್ಷೇತ್ರವನ್ನೇ ಆಯ್ದುಕೊಂಡು ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರಾಗಿ ಸಲ್ಲಿಸಿದ ಸೇವೆ. ಬಿಡುವಿನ ವೇಳೆಯಲ್ಲಿ ಯಕ್ಷಗಾನದ ಅಧ್ಯಯನ, ಪ್ರಯೋಗ ಶೀಲತೆಗಾಗಿಯೇ ಮೀಸಲು. ಕಾರ್ಕಳದ ವಿದ್ವಾನ್ ಪಿ. ವಾಮನ ಪ್ರಭುಗಳಿಂದ ಪ್ರಸಂಗಾಧ್ಯಯನ, ಛಂದಸ್ಸು, ಅರ್ಧಗಾರಿಕೆ; ಪಿ. ವಿಠಲ ಪ್ರಭುಗಳಿಂದ ತೆಂಕುತಿಟ್ಟುಕಾಳ, ಮದ್ಳಳೆ, ನುಡಿತ, ಹಾಡುಗಾರಿಕೆ; ಅಗರಿ ಶ್ರೀನಿವಾಸ ಭಾಗವತರು ಮತ್ತು ಬಲಿಪ ನಾರಾಯಣ ಭಾಗವತರಿಂದ ಹಾಡುಗಾರಿಕೆ; ಬಿ.ಗೋಪಾಲಕೃಷ್ಣ ಕುರುಪ್‌ರವರಿಂದ ಹಿಮ್ಮೇಳವಾದನದ ತಿದ್ದುಪಾಡು; ವಿದ್ವಾನ್ ಎನ್ ಸುಂದರ ಶೆಟ್ಟಿ ಮತ್ತು ಉರ್ವ ನಾರಾಯಣ ಶೆಟ್ಟಿ ಅವರಿಂದ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಹೀಗೆ ಹಲವಾರು ಮಂದಿ ವಿದ್ವಾಂಸರ ಮಾರ್ಗದರ್ಶನದಲ್ಲಿ ಕಲಿತ ಅರ್ಥಗಾರಿಕೆ, ಹಾಡುಗಾರಿಕೆ, ಹಿಮ್ಮೇಳ ವಾದನ, ವೇಷಗಾರಿಕೆ, ಹೆಜ್ಜೆಗಾರಿಕೆ ಮುಂತಾದ ಯಕ್ಷಗಾನದ ವಿವಿಧ ಕ್ಷೇತ್ರಗಳಲ್ಲಿ ಪಡೆದ ಪರಿಣತಿ. ಕಲಿತದ್ದಷ್ಟೇ ಅಲ್ಲದೆ ೧೯೯೫ ರಲ್ಲಿ ‘ಯಕ್ಷ ಕೌಮುದಿ ಉಡುಪಿ’ ಎಂಬ ತಂಡ ಕಟ್ಟಿ ಗುರುಗಳಾದ ಹಿರಿಯಡಕ ಗೋಪಾಲರಾವ್ ಮತ್ತು ಗೋಪಾಲ ಕೃಷ್ಣ ಕುರುಪ್ ಅವರ ಸಹಾಕರೊಂದಿಗೆ ತೆಂಕು ಮತ್ತು ಬಡಗು ತಿಟ್ಟುಗಳ ಯಕ್ಷಗಾನ ಪ್ರಾಯೋಗಿಕ ಪ್ರದರ್ಶನಗಳು. ೧೯೮೦ ರಿಂದಲು ಹಲವಾರು ಯಕ್ಷಗಾನ ಕಮ್ಮಟಗಳಲ್ಲಿ ಮಂಡಿಸಿದ ಪ್ರಬಂಧ, ಉಪನ್ಯಾಸ, ಪ್ರಾತ್ಯಕ್ಷಿಕೆಗಳು. ನಿರಂತರ ಯಕ್ಷಗಾನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು ರಚಿಸಿದ ಹಲವಾರು ಯಕ್ಷಗಾನ ಸಂಬಂಧಿ ಕೃತಿಗಳು. ‘ಮದ್ದಳೆಯ ಮಾಯಾಲೋಕ’ ಗುರು ಹಿರಿಯಡಕ ಗೋಪಾಲ ರಾಯರ ನೆನಪುಗಳ ಕಥನ. ‘ವಿಲೋಕನ’ (ರಂಗದ ಸಮಗ್ರ ವಿಮರ್ಶೆ), ‘ತಿಳಿನೋಟ’ (ಸಂಶೋಧನೆ ಮತ್ತು ವಿಮರ್ಶಾ ಸಮಾಹಾರ); ‘ದೀವಟಿಗೆ’ (ದೀವಲಿಗೆ ಬೆಳಕಿನ ಯಕ್ಷಗಾನದ ಪುನರುಜ್ಜೀವನ ಕಥನ); ‘ಚಿನ್ನದ ತಾಳ’ (ಭಾಗವತ ಗೋಪಾಡಿವಿಠಲ ಪಾಟೀಲರ ರಂಗಾನುಭವಗಳ ನಿರೂಪಣೆ); ‘ಹಿಮ್ಮೇಳ’ (ಯಕ್ಷಗಾನ ಅಧ್ಯಯನ ಗ್ರಂಥ); ‘ಮುಂದಲೆ’ (ಯಕ್ಷಗಾನ ವಿಮರ್ಶೆ); ‘ಯಾಜಿ ಭಾಗವತರು’ (ವ್ಯಕ್ತಿ ಚಿತ್ರಣ) ಮತ್ತು ಯಕ್ಷ ಸೇಚನ ಮುಂತಾದ ಕೃತಿಗಳು. ಹುಡುಕಿಕೊಂಡು ಬಂದ ಸಮ್ಮಾನ, ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಮೂರನೆಯ ಕಾರ್ಕಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಲಲಿತ ಕೀರ್ತಿ ಯಕ್ಷಗಾನ ಮಂಡಲಿಯಿಂದ, ಮುಂಬಯಿಯ ಡೊಂಬಿ ವಿಲಿಯ ‘ಕಲಾಜಗತ್ತು’ ಇವರಿಂದ, ಕಾಂತಾವರ ಕನ್ನಡ ಸಂಘದಿಂದ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಸಂದ ಸಮ್ಮಾನಗಳು. ಜೊತೆಗೆ ಇವರ ಕೃತಿಗಳಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ಜೀಶಂಪ ಪ್ರಶಸ್ತಿ, ಸದಾನಂದ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಇಂದಿಗೂ ಯಕ್ಷಗಾನದ ಕಾರ್ಯಕ್ರಮವೆಂದರೆ ಚಟುವಟಿಕೆಯಿಂದ ಭಾಗಿಯಾಗುವ ವ್ಯಕ್ತಿ.