Loading Events

೨೯-೧೦-೧೯೩೬ ಸುಗಮ ಸಂಗೀತ ಕ್ಷೇತ್ರಕ್ಕೊಂದು ಭದ್ರ ಬುನಾದಿ ಹಾಕಿ, ಹೊಸ ಚೈತನ್ಯ ನೀಡಿದ ಲಕ್ಷ್ಮೀನಾರಾಯಣ ಭಟ್ಟರು ಹುಟ್ಟಿದ್ದು ಶಿವಮೊಗ್ಗದಲ್ಲಿ. ತಂದೆ ನೈಲಾಡಿ ಶಿವರಾಮಭಟ್ಟರು, ತಾಯಿ ಮೂಕಾಂಬಿಕೆ. ತಂದೆಯ ಅಕಾಲ ಮೃತ್ಯುವಿನಿಂದ ಧೃತಿಗೆಡದೆ, ಬಡತನಕ್ಕಂಜದೆ ಇಂಟರ್ ಮೀಡಿಯೆಟ್‌ವರೆಗೆ ಶಿವಮೊಗ್ಗೆಯಲ್ಲಿ ಮುಗಿಸಿ ಹೆಚ್ಚಿನ ಅಧ್ಯಯನಕ್ಕೆ ಸೇರಿದ್ದು ಮೈಸೂರು. ಭಟ್ಟರಿಗೆ ಆಶ್ರಯನೀಡಿ ಅಶನ-ವಸನವನ್ನಿತ್ತಿದ್ದಲ್ಲದೆ ವಿದ್ಯೆಯ ಮಾರ್ಗದರ್ಶಕರು ತಸುಶಾ, ತೀನಂಶ್ರೀ, ಎಸ್.ವಿ. ರಂಗಣ್ಣ, ಎಸ್.ವಿ.ಪಿ, ಡಿ.ಎಲ್.ಎನ್ ಮುಂತಾದ ಹಿರಿಯರು. ೧೯೫೮ರಲ್ಲಿ ಬಿ.ಎ (ಆನರ್ಸ್), ೧೯೫೯ರಲ್ಲಿ ಎಂ.ಎ. ರ್ಯಾಂಕ್ ಪದವೀಧರರು. ಹಾಮಾನಾ ಮಾರ್ಗದರ್ಶನದಲ್ಲಿ “ಆಧುನಿಕ ಕನ್ನಡ ಕಾವ್ಯದಲ್ಲಿ ಪ್ರತಿಮಾ ವಿನ್ಯಾಸ” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಅಧ್ಯಾಪಕರಾಗಿ ಸೇರಿದ್ದು ಬೆಂಗಳೂರಿನ ಆಚಾರ‍್ಯ ಪಾಠ ಶಾಲಾ ಕಾಲೇಜು, ನಂತರ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರೊಫೆಸರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಆರ್ಟ್ ಫ್ಯಾಕಲ್ಟಿ ಡೀನ್ ಆಗಿ, ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಸಲ್ಲಿಸಿದ ಸೇವೆ ನಿವೃತ್ತಿ. ನವ್ಯಕವಿತೆಗಳ ಜೊತೆಗೆ ನೂರಾರು ಭಾವಗೀತೆಗಳ ಸೃಷ್ಟಿ. ಬಾರೋ ವಸಂತ, ದೀಪಿಕಾ, ಭಾವೋತ್ಸವ, ಮಾಧುರಿ, ಮಂದಾರ…ಮುಂತಾದ ಭಾವಗೀತೆಗಳ ಧ್ವನಿ ಮುದ್ರಿಕೆಗಳು. ಉತ್ತರ ಕರ್ನಾಟಕದ ಕೆಲವೇ ಭಾಗಕ್ಕೆ ಸೀಮಿತವಾಗಿದ್ದ ಶಿಶುನಾಳ ಷರೀಫರ ಗೀತೆಗಳನ್ನು ದೇಶ ವಿದೇಶಗಳಲ್ಲಿ ಪ್ರಚುರ ಪಡಿಸಿದ ಖ್ಯಾತಿ. ಹಲವಾರು ಬಾರಿ ವಿದೇಶಯಾತ್ರೆ ಮಾಡಿ ಕನ್ನಡದ ಕಂಪು, ಭಾವಗೀತೆಯ ಇಂಪನ್ನು ವಿದೇಶಿ ನೆಲದ ಕನ್ನಡಿಗರಿಗೆ ಮುಟ್ಟಿಸಿದವರು. ಇವರಿಂದ ಪ್ರಭಾವಿತರಾಗಿ ಸುಗಮ ಸಂಗೀತದ ಜನಪ್ರಿಯತೆ ಕಂಡು ಭಾವಗೀತೆಯನ್ನು ರಚಿಸಿದ ಕವಿಗಳಿಗೆ ಲೆಕ್ಕವಿಲ್ಲ. ಹಲವಾರು ಸಾಹಿತ್ಯ ಕೃತಿಗಳ ರಚನೆ. ಕಲವನ ಸಂಕಲನಗಳು-ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ಚಿತ್ರಕೂಟ, ಹೊಳೆಸಾಲಿನ ಮರ, ಪಾಂಚಾಲಿ, ಅರುಣ ಗೀತ. ಕಾವ್ಯಾನುವಾದ-ಸುನೀತ, ಚಿನ್ನದ ಹಕ್ಕಿ. ಭಾವಗೀತೆಗಳ ಸಂಕಲನ-ದೀಪಿಕಾ, ಭಾವಸಂಗಮ, ನೀಲಾಂಜನ, ಬಂದೇ ಬರತಾವಕಾಲ. ನಾಟಕಾನುವಾದ-ಮೃಚ್ಛಕಟಿಕ, ಇಸ್ಪೀಟರಾಜ್ಯ. ಶಾಸ್ತ್ರೀಯ ಗ್ರಂಥಗಳು-ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡದ ಮಾತು, ರೀಡಿಂಗ್ಸ್ ಇನ್ ಕನ್ನಡ. ವಿಮರ್ಶೆ-ಹೊರಳು ದಾರಿಯಲ್ಲಿ ಕಾವ್ಯ, ವಿವೇಚನ ಮತ್ತು ಹಲವಾರು ಶಿಶುಸಾಹಿತ್ಯ ಕೃತಿ. ಹಲವಾರು ಪ್ರಶಸ್ತಿಗಳ ಗರಿ-ಮೂರು ಬಾರಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಎನ್.ಸಿ.ಇ.ಆರ್.ಟಿ. ಸಂಸ್ಥೆಯ ಬಾಲ ಸಾಹಿತ್ಯ ಪುರಸ್ಕಾರ. ಶಿವರಾಮಕಾರಂತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಿ.ವಿ. ಶೇಷಗಿರಿರಾವ್ – ೧೯೦೭ ಎಂ.ಜಿ. ಭೀಮರಾವ್ (ವಂಶಿ) – ೧೯೩೧ ಆರ್.ಜಿ. ಕುಲಕರ್ಣಿ – ೧೯೩೧ ಚಂದ್ರಭಾಗಿ ಕೆ. ರೈ – ೧೯೧೬