Loading Events
  • This event has passed.

೯-೬-೧೯೩೮ ವೃತ್ತಿಯಲ್ಲಿ ವ್ಯಾಪಾರಿಯಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಪ್ರಿಯರಾದ ಗುರುಮೂರ್ತಿಯವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಗೊಂಡ ನಾರಾಯಣ ದೇವರ ಕೆರೆ. ತಂದೆ ವಿರೂಪಣ್ಣ, ತಾಯಿ ರಾಮಕ್ಕ. ಪ್ರಾರಂಭಿಕ ಶಿಕ್ಷಣ ನಾರಾಯಣ ದೇವರಕೆರೆ. ಹೈಸ್ಕೂಲು ವ್ಯಾಸಂಗ ಬಳ್ಳಾರಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್‌), ಬಿ.ಕಾಂ. ; ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ. ಮಾಡುತ್ತಿರುವ ವೃತ್ತಿಗೂ ಓದಿಗೂ ಸಂಬಂಧವಿಲ್ಲದಿದ್ದರೂ ಸತತ ಓದಿನ ಹಂಬಲ. ಡಾ.ಎನ್.ಎಸ್.ತಾರಾನಾಥರ ಮಾರ್ಗದರ್ಶನದಲ್ಲಿ ಇದೀಗ “ಕೃಷ್ಣದೇವರಾಯನ ಕಾಲದ ಶಾಸನಗಳು” ವಿಷಯದ ಬಗ್ಗೆ ಸಂಶೋಧನಾ ನಿರತರು. ಹವ್ಯಾಸ ಪ್ರವಾಸ. ಯೂರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಷಿಯಾ, ಅಮೆರಿಕಾ, ಕೆನಡಾ, ಜಪಾನ್‌ಗಳನ್ನು ಸುತ್ತಿ ಬಂದು ರಚಿಸಿದ್ದು ವಿಪುಲ ಪ್ರವಾಸ ಸಾಹಿತ್ಯ. “ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ಅಮರಾವತಿ ಅಮೆರಿಕಾ” ಮುಂತಾದ ಪ್ರಮುಖ ಪ್ರವಾಸ ಸಾಹಿತ್ಯ ಕೃತಿಗಳು ಪ್ರಕಟಿತ. ಸಂಪಾದಿತ-ಕಂಠಿ ಸರ, ಪಂಪಾತುಂತುರು, ಜಾನಪದ ಸಂಚಯ, ಮುತ್ತು ಹವಳ, ಹೆಜ್ಜೆಗಳು, ಧ್ವನಿ. ಇತರ-ಶ್ರೀ ಕನ್ನಿಕಾಪರಮೇಶ್ವರಿ ಪುರಾಣ, ನಳಪಾಕ, ಮಾಹಿತಿಯ ರಾಜಮಾರ್ಗ. ವಿಮರ್ಶೆ-ವಿನಾಯಕರ ಕಾವ್ಯ ವಿಮರ್ಶೆ. ವಚನ ಸಾಹಿತ್ಯ-ನೂರಾರು ಕಂಬದ ಮಂಟಪ ಈ ಕೃತಿಗಳು ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ವಿಶ್ವವಿದ್ಯಾಲಯ ವಿಚಾರ ಸಂಕಿರಣ, ಕಮ್ಮಟ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಂಗೀತ ಕಚೇರಿ, ನಾಟಕಗಳ ಕಾರ‍್ಯಕ್ರಮ ರೂವಾರಿ. ಸಮಾಜಸೇವೆಯಲ್ಲೂ ಮುಂದು. ಸರಸ್ವತಿ ಶಿಶುಮಂದಿರ, ರಾಷ್ಟ್ರೋತ್ಥಾನ ವಿದ್ಯಾಲಯ, ತ್ಯಾಗರಾಜ ಸಂಗೀತ ವಿದ್ಯಾಲಯ, ರಾಷ್ಟ್ರೋತ್ಥಾನ ವಿದ್ಯಾರ್ಥಿ ಮಂದಿರ ಮುಂತಾದುವುಗಳ ಸ್ಥಾಪಕರು. ಸಂದ ಗೌರವ ಪ್ರಶಸ್ತಿಗಳು-ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ರನ್ನ ಪ್ರಶಸ್ತಿ, ಗೋರೂರು ಸಾಹಿತ್ಯ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹರಿಯಾಣದ ಪಾಣಿಪತ್‌ನಗರ ಜೈಮಿನಿ ಅಕಾಡಮಿಯವರ ಸುಭದ್ರಾಕುಮಾರಿ ಚೌಹಾನ್ ಜನ್ಮ ಶತಾಬ್ದಿ ಸಮ್ಮಾನ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಸ್.ಕೆ. ಜೋಶಿ – ೧೯೩೬ ಕೆ.ಎನ್. ಭಗವಾನ್ – ೧೯೪೨ ಅರುಂಧತಿ ರಮೇಶ್ – ೧೯೫೦ ರೇಖಾ ಕಾಖಂಡಕಿ – ೧೯೫೪ ಶಾಂತಾ ಇಮ್ರಾಪುರ್ – ೧೯೫೪ ನೀರಗುಂದ ಕೇಶವಮೂರ್ತಿರಾವ್ – ೧೯೪೨ ಶಮಂತಕ – ೧೯೫೬ ಭೈರೇಗೌಡ – ೧೯೬೩