Loading Events
  • This event has passed.

೨೮-೫-೧೯೦೬ ೨-೯-೧೯೯೧ ಹುಟ್ಟಿದ್ದು ಆಂಧ್ರದ ಗಡಿ ಭಾಗವಾದ ಪಾವಗಡದಲ್ಲಿ. ಬಹುಸಂಖ್ಯಾತ ತೆಲುಗು ಮಾತನಾಡುವವರ ಮಧ್ಯೆ ಬೆಳೆದ ವೆಂಕಟರಾಮಪ್ಪನವರಿಗೆ ಕನ್ನಡದಲ್ಲಿ ಎಷ್ಟು ಪ್ರಾವೀಣ್ಯತೆ ಇತ್ತೋ ತೆಲುಗಿನಲ್ಲೂ ಅಷ್ಟೆ ಪ್ರಾವೀಣ್ಯತೆ ಪಡೆದಿದ್ದರು. ತಂದೆ ಸುಬ್ಬಾಶಾಸ್ತ್ರಿ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಪಾವಗಡದಲ್ಲಿ. ನಂತರ ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆದದ್ದು. ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕನ್ನಡ ಎಂ.ಎ. ತರಗತಿ ಪ್ರಾರಂಭಿಸಿದಾಗ ಮೊದಲ ಗುಂಪಿನಲ್ಲಿ ಪ್ರವೇಶ ಪಡೆದವರೆಂದರೆ ಕುವೆಂಪು, ಡಿ.ಎಲ್.ಎನ್., ಅನಂತರಂಗಾಚಾರ್, ವೆಂಕಟರಾಮಪ್ಪ ಮುಂತಾದ ಒಂಬತ್ತು ಮಂದಿ. ಎಲ್ಲರೂ ಘಟಾನುಘಟಿಗಳೇ! ಎಂ.ಎ. ಮುಗಿಸಿದ ನಂತರ ಅಧ್ಯಾಪಕ ವೃತ್ತಿಯನ್ನಾಯ್ದುಕೊಂಡು ಅಧ್ಯಾಪಕ ವೃತ್ತಿಗೊಂದು ಘನತೆ, ಗೌರವಗಳ ಭದ್ರಬುನಾದಿ ಹಾಕಿದರು. ಅಧ್ಯಾಪನ ಎನ್ನುವುದು ಒಂದು ಕಲೆ ಎಂಬುದನ್ನು ಸಾಸಿ ತೋರಿಸಿದರು. ಪಠ್ಯ ವಿಷಯದ ಜೊತೆಗೆ ಇತರ ವಿಷಯಗಳನ್ನು ಬೆರೆಸಿದರೂ ಹೇಳಬೇಕಾದುದೆಲ್ಲವನ್ನೂ ಆಕರ್ಷಕವಾಗಿ ಹೇಳಿ, ವಿದ್ಯಾರ್ಥಿಗಳ ಚಿತ್ತವನ್ನು ಅಪಹರಿಸುವ ಕಲೆ ಕರಗತ. ಬೇರೆ ತರಗತಿಯ ವಿದ್ಯಾರ್ಥಿಗಳೂ ತಮ್ಮ ತರಗತಿಗೆ ತಪ್ಪಿಸಿಕೊಂಡರೂ ಇವರ ತರಗತಿಗೆ ತಪ್ಪದೆ ಹಾಜರಾಗುತ್ತಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ತಮ್ಮ ವಾಗ್ವೈಖರಿಯಿಂದ ವಿದ್ಯಾರ್ಥಿಗಳ ಮನ ಗೆದ್ದರು. ನಿವೃತ್ತರಾಗುವ ಕೆಲವು ವರ್ಷ ಸ್ನಾತಕೋತ್ತರ ವಿಭಾಗದ ರೀಡರ್ ಆಗಿ ನಿವೃತ್ತರಾದರು. ಇವರು ಬರೆದ ಲೇಖನಗಳೇ ನೂರಾರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿ ರಚನೆ. ತೆಲುಗು ಚಾಟು ಪದ್ಯಗಳು, ಶ್ರೀನಾಥ, ವೇಮನ, ಹರವಿಲಾಸ, ಪಂಪಭಾರತ ದರ್ಶನ, ಕನಕದಾಸ, ದುರ್ಗಸಿಂಹ, ಶ್ರೀ ಪುರಂದರದಾಸರು, ಜನ್ನನ ಕಾವ್ಯಪರಿಚಯ, ಕವಿನೇಮಿಚಂದ್ರ, ಕನ್ನಡ ಸಾಹಿತ್ಯ ಕುರಿತ ಅಂಗೈ ಅಗಲ ಪುಸ್ತಿಕೆ, ಕನ್ನಡ-ತೆಲುಗು ಕವಿಗಳಾದ ಪಂಪ-ನನ್ನಯರ ತೌಲನಿಕ ಅಧ್ಯಯನ, ತೆಲುಗಿನ ಪ್ರಸಿದ್ಧ ಕಾದಂಬರಿ ರುದ್ರಮದೇವಿ ಕನ್ನಡಕ್ಕೆ ಅನುವಾದ. ಸಂಪಾದಿತ ಕೃತಿಗಳು ದೇಜಗೌರೊಡನೆ ಲೀಲಾವತಿಕಾವ್ಯ ಮತ್ತು ನಿತ್ಯಾತ್ಮ ಶುಕಯೋಗಿಯ ಭಾಗವತದ ಭಾಗ ೧, ೨, ದಶಮಸ್ಕಂದ, ಶ್ರೀಕೃಷ್ಣ ಚರಿತೆ ಮುಂತಾದುವು. ಇಂಗ್ಲಿಷ್ ಭಾಷಾಂತರ-ಪ್ಲೇಟೋನ ರಿಪಬ್ಲಿಕ್ ಗ್ರಂಥವನ್ನು ಕನ್ನಡಕ್ಕೆ ಕೊಟ್ಟ ಹಿರಿಮೆ. ಪ್ರಬಂಧ ಸಂಗ್ರಹ-ವಿಚಾರ ಲಹರಿ, ಹೊಸ ನೀರು, ಕೋಣನ ಮಂತ್ರ. ಕಾವ್ಯಮಂಥನ, ಇಂಗ್ಲಿಷ್ ನಾಟಕಗಳು, ಗಣೇಶನ ಮದುವೆ ಇತರ ಕೃತಿಗಳು ಸೇರಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೃತಿ ರಚಿತ. ಇವರ ವಿದ್ವತ್ತನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡಮಿ ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಬಹುಶ್ರುತರಾದ ಕೋಟೆ ಬಂಡೆ ವೆಂಕಟರಾಮಪ್ಪನವರು ಗತಿಸಿದ್ದು ಸೆಪ್ಟಂಬರ್ ೨, ೧೯೯೧ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಾಂತಾರಾಮ ಸೋಮಯಾಜಿ – ೧೯೪೭ ಕೌಸಲ್ಯಾ ಧರಣೇಂದ್ರ – ೧೯೩೭ ಗೌತಮಿ ಕೆದಂಬಾಡಿ – ೧೯೫೮-೧೧.೧೨.೭೮