Loading Events

೩೦.೦೯.೧೯೬೯ ಭರತ ನಾಟ್ಯ ಮತ್ತು ಮೋಹಿನಿ ಆಟ್ಟಂ ನೃತ್ಯ ವಿದುಷಿ ಇಂದಿರಾ ಕಡಾಂಬಿಯವರು ಹುಟ್ಟಿದ್ದು ಬೆಂಗಳೂರು. ತಂದೆ ಜಿ.ಎನ್.ಟಿ. ನಾರಾಯಣ್‌, ತಾಯಿ ಜಿ.ಎನ್‌.ಟಿ. ಹರಿಣಿ. ಆರನೆಯ ವಯಸ್ಸಿನಿಂದಲೇ ನೃತ್ಯಾಭ್ಯಾಸ. ಜನಾರ್ದನ ಶರ್ಮರವರಲ್ಲಿ ಪ್ರಾರಂಭಿಕ ಶಿಕ್ಷಣ. ಉಷಾದಾತಾರ್‌, ನರ್ಮದಾ, ನಾರಾಯಣ್‌ರವರಲ್ಲಿ ನೃತ್ಯ ವಿಶೇಷ ತರಬೇತಿ. ಕಮಿಲಾ ರಾಣಿಯವರಿಂದ ನಟುವಾಂಗದ ಮಾರ್ಗದರ್ಶನ. ಕಲಾಮಂಡಲಂ ಕಲ್ಯಾಣಿ ಕುಟ್ಟಿ ಅಮ್ಮರಿಂದ ಮೋಹಿನಿ ಆಟ್ಟಂ ಶಿಕ್ಷಣ. ಸಂಗೀತ ಶಿಕ್ಷಣ ನೀಡಿದವರು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್‌ ಮತ್ತು ಪತಿ ವಿದ್ವಾನ್‌ ಟಿ.ವಿ. ರಾಮಪ್ರಸಾದ್‌. ಇದೀಗ ತಾವೇ ನಡೆಸುತ್ತಿರುವ ಸಂಗೀತ ನೃತ್ಯ ಶಾಲೆಯ ನಿರ್ದೇಶಕಿ. ಬೆಂಗಳೂರಿನ ನೃತ್ಯ ಗ್ರಾಮದ ವರ್ಷ ಋತು ನೃತ್ಯ, ಕೇರಳದ ನಿಶಾಗಂಧಿ, ಪಟ್ಟದಕಲ್ಲಿನ ನೃತ್ಯೋತ್ಸ, ಮುಂಬಯಿಯ ಚೌಡಯ್ಯ ಸ್ಮಾರಕ ಸಂಗೀತ ನೃತ್ಯೋತ್ಸವ, ಹುಬ್ಬಳ್ಳಿಯ ಪಂಡಿತ ಕುಮಾರ ಗಂಧರ್ವ ಸಂಗೀತ ನೃತ್ಯೋತ್ಸವ, ಕರಾವಳಿ ಉತ್ಸವ, ಶತಾವಧಾನಿ ಆರ್‌.ಗಣೇಶ್‌ ಮತ್ತು ಚಿತ್ರ ಕಲಾವಿದ ಬಿ.ಕೆ.ಎಸ್‌.. ವರ್ಮರೊಡನೆ ನಡೆಸಿಕೊಟ್ಟ ಕಾವ್ಯ – ಚಿತ್ರ – ಗೀತ – ನೃತ್ಯ ಪ್ರಖ್ಯಾತ ಕಾರ್ಯಕ್ರಮ. ಭೂಪಾಲ್‌, ಮದರಾಸಿನ ಕಲಾಚಾರ್‌ ಮುಂತಾದೆಡೆ ಕಾರ್ಯಕ್ರಮಗಳು. ಯು.ಕೆ., ಜರ್ಮನಿ, ಫ್ರಾನ್ಸ್‌, ಆಸ್ಟ್ರೇಲಿಯ, ಮಲೇಷಿಯಾ ಮುಂತಾದೆಡೆ ಹಲವಾರು ಬಾರಿ ನೀಡಿದ ನೃತ್ಯ ಪ್ರದರ್ಶನ. ಲಾಸ್‌ಏಂಜಲೀಸ್‌, ಫಿಲಿಡೆಲ್ಫಿಯಾ ಮುಂತಾದೆಡೆ ಪ್ರಾಥಮಿಕ ನೃತ್ಯಪಾಠ, ನೃತ್ಯ ಉಪನ್ಯಾಸ, ಉನ್ನತ ಮಟ್ಟದ ನೃತ್ಯ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ನೃತ್ಯ ಪ್ರದರ್ಶನ. ಚೆನ್ನೈ ನಾಟ್ಯರಂಗಂ ನಾರದಗಾನ ಸಭಾದಿಂದ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ನಾಟ್ಯ ಶಾಂತಲ ಪ್ರಶಸ್ತಿ, ದಕ್ಷಿಣ ವಲಯ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರದಿಂದ ಉತ್ತಮ ನೃತ್ಯ ಪಟು, ಹಲವಾರು ಸಂಘ ಸಂಸ್ಥೆಗಳಿಂದ ನೃತ್ಯ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದಕಲಾವಿದೆ ನಂದಿನಿ ಆಳ್ವ – ೧೯೬೧

* * *