Loading Events
  • This event has passed.

೦೫.೦೨.೧೯೪೩ ರಂಗಕರ್ಮಿ, ಆದರ್ಶ ಶಿಕ್ಷಕ, ನೈತಿಕ ಮೌಲ್ಯಗಳ ಬೋಧಕ ಈಶ್ವರಪ್ಪನವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ರಾಗಿಹೊಸಹಳ್ಳಿ. ತಂದೆ ಮರುಳಪ್ಪ, ತಾಯಿ ಸಿದ್ದಮ್ಮ. ಪಡೆದಿದ್ದು ಬಿ.ಎ. ಮತ್ತು ಬಿ.ಎಡ್. ಪದವಿ ಜೊತೆಗೆ ದೈಹಿಕ ಶಿಕ್ಷಣ ಕಾಲೇಜಿನಿಂದ ಬಿ.ಪಿ.ಇಡಿ ಮತ್ತು ಛಾಯಾ ನಾಟಕ ಸಂಸ್ಥೆಯಿಂದ ಡಿ.ಡಿ.ಇಡಿ ಪದವಿಗಳು. ಉದ್ಯೋಗಕ್ಕೆ ಸೇರಿ ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸಲ್ಲಿಸಿದ ಸೇವೆ. ಎಳವೆಯಿಂದಲೇ ಬೆಳೆದ ನಾಟಕದ ಅಭಿರುಚಿ. ಶಾಲಾ ವಾರ್ಷಿಕೋತ್ಸವದಲ್ಲಿ ಚತುರ ಕೃಷ್ಣ ನಾಟಕದ ಮಕರಂದನ ಅಭಿನಯಕ್ಕೆ ಸಿಕ್ಕ ಅಪಾರ ಮೆಚ್ಚುಗೆ. ಇದರಿಂದ ಉತ್ತೇಜಿತರಾಗಿ ಪ್ರಾರಂಭಿಸಿದ್ದು ನವರತ್ನ ನಾಟಕ ಸಂಘ. ನಾಟಕ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ೧೯೮೧ರಲ್ಲಿ ಕೇಂದ್ರ ಸರಕಾರದ ವಿದ್ಯಾ ಇಲಾಖೆಯ ಅಂಗವಾಗಿ ಸಂಸ್ಕೃತಿ, ಸಾಹಿತ್ಯ, ಕಲೆ, ಸಂಪನ್ಮೂಲ ಕೇಂದ್ರದ ವತಿಯಿಂದ ನವದೆಹಲಿಯಲ್ಲಿ ನಡೆದ ತರಬೇತಿ ಕೇಂದ್ರದಲ್ಲಿ ಅಭ್ಯರ್ಥಿಯಾಗಿ ಪಾಲ್ಗೊಂಡು ಆಯ್ಕೆಯಾದ ಉತ್ತಮ ಅಭ್ಯರ್ಥಿ ಎಂಬ ಹೆಗ್ಗಳಿಕೆ. ಬ್ರಹ್ಮಚಾರಿ, ಕೊಟ್ರಲ್ಲ ಕೈನಾ, ಕೈಲಾಸಂ ರವರ ಗಂಡಸ್ಕತ್ರಿ, ಕಿತ್ತೂರು ಚೆನ್ನಮ್ಮ, ಸಂಸರ ವಿಗಡವಿಕ್ರಮರಾಯ, ಕೀರ್ತಿ ಶೇಷ, ಟಾರ್ಜಾನ್, ಕಂಬಳಿ ನಾಗಿದೇವ, ಶಿವಯೋಗಿ ಸಿದ್ಧರಾಮ, ಧರ್ಮಪುರಿಯ ಶ್ವೇತವೃತ್ತ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿ, ಬೆಪ್ಪುತಕ್ಕಡಿ ಬೋಳೆ ಶಂಕರ ನಾಟಕದಲ್ಲಿನ ಮಹಾರಾಜರ ಪಾತ್ರಾಭಿನಯ. ಕರ್ನಾಟಕದಾದ್ಯಂತ ಕಂಡ ಹಲವಾರು ಪ್ರದರ್ಶನಗಳು. ಶ್ರೀ ಶಿವಕುಮಾರ ಹವ್ಯಾಸಿ ಕಲಾ ಸಂಘದ ವತಿಯಿಂದ ಹೊಸ ನಾಟಕಗಳ ಪ್ರಯೋಗ, ರಾಜ್ಯಾದ್ಯಂತ ಪ್ರದರ್ಶನ, ಗಳಿಸಿದ ಜನಮನ್ನಣೆ. ನಟರಾಗಿ ನಾಟಕರಂಗ ಸಂಸ್ಥೆಗಳಲ್ಲಿ ದುಡಿಯುವುದರ ಜೊತೆಗೆ ಜಿಲ್ಲಾ ಪಂಚಾಯ್ತಿ ಸಹಯೋಗದೊಡನೆ ಎರಡು ರಂಗಮಂದಿರ ನಿರ್ಮಾಣ. ರಂಗ ಚಟುವಟಿಕೆಗಳಿಗೆ ಕೊಟ್ಟ ಪ್ರಾಶಸ್ತ್ಯ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮುಂತಾದ ಜಿಲ್ಲೆಗಳ ಕಲಾ ಪ್ರದರ್ಶನ ರೂವಾರಿ. ನಟರಾಗಿ, ಆದರ್ಶ ಶಿಕ್ಷಕರಾಗಿ ಪಡೆದ ಪ್ರಶಸ್ತಿಗಳು ಹಲವಾರು. ಕೇಂದ್ರ ಸಿ.ಸಿ.ಆರ್.ಟಿ. ಪ್ರಶಸ್ತಿ, ರಾಜ್ಯ ಸರಕಾರದ ಉತ್ತಮ ಶಿಕ್ಷಕ ಪ್ರಶಸ್ತಿ, ಭದ್ರಾವತಿ ಆಕಾಶವಾಣಿ ಬಹುಮಾನ, ಚಿತ್ರದುರ್ಗ ಜಿಲ್ಲೆ ಆದರ್ಶಗುರು ಪ್ರಶಸ್ತಿ, ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿ, ಪ್ರಶಸ್ತಿ ಪುರುಷ, ಶ್ರೇಷ್ಠ ಶಿಕ್ಷಕ ಬಿರುದುಗಳು. ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ನಶಿಸುತ್ತಿರುವ ನೈತಿಕ ಮೌಲ್ಯಗಳ ಬಗ್ಗೆ ಸದಾ ಚಿಂತಿಸುತ್ತ, ಬೋಧನೆ, ನಾಟಕಗಳ ಮುಖಾಂತರ ಸಮಾಜದ, ವಿದ್ಯಾರ್ಥಿಗಳ ಆರೋಗ್ಯ, ಮನಃಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ದೀಕ್ಷಾಬದ್ಧರಾಗಿ ದುಡಿಯುತ್ತಿರುವ ಅಪರೂಪದ ನಟ, ಶಿಕ್ಷಕ.   ಇದೇ ದಿನ ಹುಟ್ಟಿದ ಕಲಾವಿದರು : ಎಚ್.ಎಸ್. ಶಂಕರನಾಥ ದಾಸ್ – ೧೯೩೦

* * *