Loading Events

೩೧-೧೦-೧೯೪೯ ಸಾಹಿತ್ಯ, ಸಂಗೀತ, ನಟನೆ, ವಾಙ್ಮಯ ಹೀಗೆ ಹಲವಾರು ಪ್ರತಿಭೆಗಳ ಸಂಗಮವಾಗಿರುವ ಅನಸೂಯಾದೇವಿಯವರು ಹುಟ್ಟಿದ್ದು ಬೆಂಗಳೂರು. ದಕ್ಷಿಣ ಕನ್ನಡ ಮೂಲದವರಾದ ತಂದೆ ತಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧನಾವೃತ್ತಿ. ಪ್ರಸ್ತುತ ಬೆಂಗಳೂರಿನ ಬಿ.ಎಚ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ, ವಿಭಾಗದ ಮುಖ್ಯಸ್ಥೆಯಾಗಿ ಕಾರ‍್ಯ ನಿರ್ವಹಣೆ. ಶಾಲಾ ಕಾಲೇಜು ದಿನಗಳಿಂದಲೂ ನಟನೆಯಲ್ಲಿ ಪಳಗಿದವರು. ಬಾಲ ಕಲಾವಿದೆಯಾಗಿ ಆಕಾಶವಾಣಿಯ ಹಲವಾರು ಕಾರ‍್ಯಕ್ರಮಗಳಲ್ಲಿ ಭಾಗಿ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ (ಹಾಡುಗಾರಿಕೆ) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣತೆ. ಲಘು ಸಂಗೀತ ಕ್ಷೇತ್ರ, ವಿಣಾವಾದನ, ಕೀಬೋರ್ಡ್ ನುಡಿಸುವಲ್ಲಿಯೂ ಅಗಾಧವಾದ ಪ್ರತಿಭೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಕಾರ‍್ಯಕ್ರಮಗಳ ಮುಂದಾಳತ್ವ. ‘ಅನುವಸಂತ’ ಎಂಬ ಸಂಗೀತದ ತಂಡ ಕಟ್ಟಿ ಧಾರ್ಮಿಕ ಕಾರ‍್ಯಕ್ರಮಗಳು, ಸಂತೋಷ ಕೂಟಗಳಲ್ಲಿ ಗಾಯಕಿಯಾಗಿ ನಡೆಸಿಕೊಟ್ಟ ಸುಗಮ ಸಂಗೀತದ ಹಲವಾರು ಕಾರ‍್ಯಕ್ರಮಗಳು. ಚಂದನ ಟಿ.ವಿ.ಯ “ಕಾವ್ಯ ಸಂಪುಟ” ಕಾರ‍್ಯಕ್ರಮದಡಿ ಭೀಷ್ಮಪರ್ವ, ಕರ್ಣಪರ್ವದ ಭಾಗಗಳನ್ನು ಗಮಕಿಯಾಗಿ ಕಾವ್ಯವಾಚನ ಕಾರ‍್ಯಕ್ರಮ. ಶಾಸ್ತ್ರೀಯ ಹಾಗೂ ಲಘು ಸಂಗೀತ ತರಗತಿಗಳ ಮೂಲಕ ಕಿರಿಯ ಪ್ರತಿಭೆಗಳಿಗೆ ನೀಡುತ್ತಿರುವ ಉತ್ತೇಜನ. ವಿದೇಶಗಳಲ್ಲಿಯೂ ನಡೆಸಿಕೊಟ್ಟಿರುವ ಹಲವಾರು ಕಾರ‍್ಯಕ್ರಮಗಳು. ಮಲೇಶಿಯಾದ ಕೌಲಾಲಂಪುರ್ ಕನ್ನಡ ಸಂಘ, ಸಿಂಗಾಪುರದ ಕನ್ನಡ ಸಂಘ, ಅಬು ಧಾಬಿ (U.A.E) ವಿಶ್ವಕನ್ನಡ ಸಮ್ಮೇಳನ, ದುಬೈ ಕನ್ನಡಿಗರ ಮೇಳಗಳಲ್ಲಿ ನಡೆಸಿಕೊಟ್ಟ ಸುಗಮಸಂಗೀತ ಕಾರ‍್ಯಕ್ರಮಗಳು. ಹಲವಾರು ಸಾಹಿತ್ಯ ಕೃತಿಗಳ ರಚನೆ. ಕಥಾಸಂಕಲನಗಳು-ಮಲ್ಲಿಗೆಹೂ, ಉರಿಯ ಬೇಲಿ. ಕವನ ಸಂಕಲನಗಳು-ಪ್ರಕೃತಿ ಪುರುಷ, ಅಮ್ಮ…ನಿನ್ನ ನೆನಪಿಗೆ, ಕೇಶವನಮನ, ಅನನ್ಯ. ರಾಬಿನ್ ಕುಕ್‌ರವರ ಫೀವರ್ ಕಾದಂಬರಿ ‘ಸಂಕಟವೇ ನಿಲ್ಲು, ಸಾಧನೆಯಾಗು’ ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ, ಸ್ವತಂತ್ರ ಕಾದಂಬರಿ ‘ಆಕಾಶದ ಹಾಡು’ ಕರ್ಮವೀರದಲ್ಲಿ ಪ್ರಕಟಿತ. ಸಂದ ಹಲವಾರು ಪ್ರಶಸ್ತಿ ಗರಿಗಳು. ಪ್ರಕೃತಿ-ಪುರುಷ ಕವನ ಸಂಕಲನಕ್ಕೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಉರಿಯ ಬೇಲಿ ಕಥಾಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ. ಕುವೆಂಪುಶ್ರೀ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿ : ಕೆ.ಎನ್. ಪವಿತ್ರ – ೧೯೭೬