ಸೂಕ್ಷ್ಮಜೀವಾಣುವಿಜ್ಞಾನದ ಇತಿಹಾಸ
ಸೂಕ್ಷ್ಮಜೀವಾಣುಗಳು ಈ ಜಗತ್ತಿಗೆ ನಮಗಿಂತಲೂ ಹಳಬರೇ. ಆದರೂ ಅವುಗಳ ಬಗ್ಗ ನಮಗೆ ತಿಳಿದದ್ದು ತಡವಾಗಿ; ಸೂಕ್ಷ್ಮಜೀವಾಣುವಿಜ್ಞಾನದ ದಾಖಲೀಕೃತ ಇತಿಹಾಸ ಸರಿ ಸುಮಾರು ೧೭ನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ಆದರೆ ಇದಕ್ಕೂ ಸಾವಿರಾರು ವರ್ಷಗಳ ಮೊದಲೇ ವೇದಗಳಲ್ಲಿ, ಜೈನರ ರೋಮನ್ನರ ಇಸ್ಲಾಮಿನ ಗ್ರಂಥಗಳಲ್ಲಿ ಸೂಕ್ಷ್ಮಜೀವಾಣುಗಳ ಬಗ್ಗೆ ವಿಸ್ತೃತ ವಿವರಣೆ ಇದೆ; ಸೂಕ್ಷ್ಮ ಜೀವಿಗಳನ್ನು ಕಣ್ಣಾರೆ ಕಾಣಲು ಸಹಾಯ ಮಾಡುವ ಯಾವುದೇ ಸಾಧನಗಳು ಲಭ್ಯವಿಲ್ಲದಿದ್ದರೂ, ಅವುಗಳ ಇರುವನ್ನು ಸಾರುವ ಹಾಲು ಮೊಸರಾಗುವ ವಿದ್ಯಮಾನ, ಹಿಟ್ಟು ಹುದುಗುವ ಪ್ರಕ್ರಿಯೆ, ಮದ್ಯ ತಯಾರಿಯಂತಹ ದಿನನಿತ್ಯದ [...]