ಸಿನಿಮಾಂತರಂಗ – ಒಳ್ಳೆಯ ಸಿನಿಮಾ ವೀಕ್ಷಣೆಗೆ ಒಂದು ಮುನ್ನುಡಿ
ಸಿನಿಮಾ ಬಗ್ಗೆ ಮಾತನಾಡುವಾಗ ಅದು ಅತ್ಯಂತ ಪ್ರಭಾವಶಾಲೀ ಜನಪ್ರಿಯ ಸಮೂಹಮಾಧ್ಯಮ; ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು ಎಂಬ ಅಭಿಪ್ರಾಯ ಸರ್ವೇಸಾಧಾರಣವಾಗಿ ಕೇಳಿಬರುತ್ತದೆ. ಒಂದುಕಡೆ ಸಿನಿಮಾ ಎನ್ನುವುದೇ ಒಂದು ವಿಶಿಷ್ಟಭಾಷೆ; ಅದಕ್ಕೆ ತನ್ನದೇ ಆದ ವ್ಯಾಕರಣವೊಂದಿದೆ; ಅದರಲ್ಲಿ ಮೂರ್ತಗೊಳ್ಳುವ ಕೃತಿಗಳಿಗೆ ಸಮಗ್ರವಾದ, ಸಂಕೀರ್ಣವಾದ ಮೀಮಾಂಸೆಯೂ ಇದೆ ಎಂದು ಅರಿಯದ ಪ್ರೇಕ್ಷಕರಿದ್ದಾರೆ. ಮತ್ತೊಂದೆಡೆ ಈ ಅಂಶಗಳನ್ನು ಗೌಣವಾಗಿಸಿ, ಸಿನಿಮಾವನ್ನು ಗ್ರಾಹಕರ ಅಪೇಕ್ಷೆಗನುಗುಣವಾಗಿ ತಯಾರಿಸಿದ ಔದ್ಯಮಿಕ ಸರಕೆಂದು ನಂಬುವ ಬಂಡವಾಳಗಾರರು, ತಯಾರಕರು, ತಂತ್ರಜ್ಞರು, ವಿತರಕರು, ಮತ್ತು ಪ್ರದರ್ಶಕರು ಇದ್ದಾರೆ. ಸಿನಿಮಾವನ್ನು ತಮ್ಮ [...]