ಕನ್ನಡ ನಾಡಿನ ಶಾಸನಗಳ ಅಧ್ಯಯನ: ಕೆಲವು ಗ್ರಹಿಕೆಗಳು: ೭. ಶಾಸನಾಧ್ಯಯನದ ಸಾಧ್ಯತೆಗಳು
ಅನೇಕ ಹೊಸ ರೀತಿಯ ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ ಎಂಬ ತೃಪ್ತಿಯ ನಡುವೆಯೂ ಇನ್ನೂ ಸಾಧಿಸುವುದು ಬಹಳಯಿದೆಂಬುದೂ ಮನವರಿಕೆಯಾಗುತ್ತಿದೆ. ಅಧ್ಯಯನಕ್ಕೊಳಗಾಗಬೇಕಾದ ಹಲವಾರು ವಿಷಯಗಳು ಶಾಸನಗಳಲ್ಲಿ ಹುದುಗಿ ಕುಳಿತಿವೆ. ಅವುಗಳ ಬಗ್ಗೆ ಒಂದಿಷ್ಟು ಗಮನ ಹರಿಸಬಹುದು. ಶಾಸನಗಳು ಯಾವುದೋ ಒಂದು ಕಾಲದ ರಾಜಕೀಯ ವಿಷಯವನ್ನೋ ಒಂದು ಘಟನೆಯನ್ನೋ ಅಥವಾ ಯಾರದೋ ಬಲಿದಾನವನ್ನು ಕುರಿತೋ ಹೇಳುತ್ತಿದ್ದಿರ ಬಹುದು. ಆದರೆ ಅವು ಇಂದಿಗೂ ನಮ್ಮ ಗ್ರಾಮ್ಯ ಸಮಾಜದಲ್ಲಿ ಜನರೊಡನೆ ಇವೆ. ಅವುಗಳಲ್ಲಿ ಏನಿದೆಯೆಂಬ ತಿಳುವಳಿಕೆಯಿಲ್ಲದ್ದಿದ್ದರೂ, ಅವುಗಳ ಬಗೆಗೆ ತಮ್ಮದೇ ಆದ ಕಥೆಗಳು,ವಾದಗಳನ್ನು ಮತ್ತು [...]