ನೀರಾವರಿ ಜಲದ ಪೂರೈಕೆ: ಬೋದು ಕಾಲುವೆಗಳ ಪ್ರತಿ ಕಾಲುವೆಯ ಮುಖದಲ್ಲಿರುವ ಮಣ್ಣನ್ನು, ಸನಿಕೆಯಿಂದ ಅಗೆದು, ಮೇಲ್ಭಾಗದಲ್ಲಿರುವ ಮುಖ್ಯಕಾಲುವೆಯಿಂದ ನೀರು ಒಳಗೆ ಬರಲು ಬಿಡುವ ಪದ್ಧತಿಯು ಈಗ ರೂಢಿಯಲ್ಲಿದೆ. ಕಾಲುವೆಯ ಕೊನೆಯವರೆಗೆ ನೀರು ಹರಿಯಿತೆಂದರೆ, ಸಂಬಂಧಿಸಿದ ಕಾಲುವೆಯ ಮುಖದಲ್ಲಿರುವ ಸ್ಥಳವನ್ನು ಮುಚ್ಚಿ, ಮುಂದಿನ ಕಾಲುವೆಗೆ ನೀರನ್ನು ಬಿಡಲಾಗುತ್ತದೆ.
ಮೇಲಿನ ಕ್ರಮದ ಬದಲು, ಮುಖ್ಯ ಕಾಲುವೆಯಿಂದ (ತಲೆಗಾಲುವೆಯಿಂದ) ಕೊಳವೆಯ ಮೂಲಕ ನೀರನ್ನು ನೇರವಾಗಿ ಕಾಲುವೆಗೆ ಬಿಡಬಹುದು. ಇದಕ್ಕಾಗಿ, ಹಗುರ ಪ್ಲಾಸ್ಟಿಕ್ಕಿನ, ಅಲ್ಯೂಮಿನಿಯಂನ, ಗ್ಯಾಲ್ವನಾಯ್‌ಜ್ಡ್‌ಕಬ್ಬಿಣದ ಅಥವಾ ರಬ್ಬರಿನಿಂದ ನಿರ್ಮಿಸಿದ ಸುಮಾರು ೧.೨೫ ಮೀಟರು ಉದ್ದವಿರುವ ಮತ್ತು ೪-೫ ಸೆಂ.ಮೀ. ವ್ಯಾಸದ ಕೊಳವೆಗಳನ್ನು ಬಳಸಬಹುದು. ಕೊಳವೆಯಲ್ಲಿ ನೀರನ್ನು ತುಂಬಿ, ಒಂದು ತುದಿಯನ್ನು ತಲೆಗಾಲುವೆಯ ನೀರಿನಲ್ಲೂ, ಇನ್ನೊಂದು ತುದಿಯನ್ನು ನೀರಿನ ಪೂರೈಕೆಯಾಗಬೇಕಾದ ಕಾಲುವೆಯಲ್ಲಿಯೂ ಇಡಬೇಕು. ಸೈಫನ್ (Syphon) ತತ್ವದ ಆಧಾರದ ಮೇಲೆ, ತಲೆಗಾಲುವೆಯಲ್ಲಿದ್ದ ನೀರು, ಕಾಲುವೆಗೆ ಬಂದು ಹರಿಯತೊಡಗುತ್ತದೆ. ತಲೆಗಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಮೇಲಿಂದ, ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಾಲುವೆಗಳಿಗೆ ನೀರು ಪ್ರವೇಶಿಸುವಂತೆ ಮಾಡಲು ಸಾಧ್ಯವಿದೆ. ಹೀಗೆ ಮಾಡುವುದರಿಂದ, ತಲೆಗಾಲುವೆಯ ಬದುವನ್ನು ಮೇಲಿಂದ ಮೇಲೆ ಕತ್ತರಿಸುವ ಅವಶ್ಯಕತೆ ಬರುವುದಿಲ್ಲ.
ತಲೆಗಾಲುವೆಯಲ್ಲಿ ಹರಿಯುವ ನೀರನ್ನು, ಭೂಮಿಯೊಳಗೆ ಬಿಡಲು ಇನ್ನೊಂದು ಪದ್ಧತಿಯನ್ನು ಅನುಸರಿಸಬಹುದು. ಗ್ಯಾಲ್ವನಾಯ್‌ಜ್ಡ್‌ಕಬ್ಬಿಣದಿಂದ ಇಲ್ಲವೇ ಅಲ್ಯೂಮಿನಿಯಂನಿಂದ ನಿರ್ಮಿಸಿದ ಕೊಳವೆಗಳನ್ನು ಇದಕ್ಕೆ ಬಳಸಲಾಗುತ್ತದೆ. ಈ ಕೊಳವೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಕೊಳವೆಗಳನ್ನು, ತಲೆಗಾಲುವೆವರೆಗೆ ಇಟ್ಟು, ಇವುಗಳಲ್ಲಿ ನೀರು ಹರಿಯುವಂತೆ ಮಾಡಲಾಗುತ್ತದೆ. ಆಗ ನೀರು, ಕೊಳವೆಯಲ್ಲಿರುವ ರಂಧ್ರಗಳ ಮೂಲಕ ಹೊರ ಹರಿದು ಕಾಲುವೆಯನ್ನು ಪ್ರವೇಶಿಸುತ್ತದೆ. ರಂಧ್ರಗಳನ್ನು ಇಚ್ಛಾನುಸಾರ ಸಣ್ಣ ಇಲ್ಲವೇ ದೊಡ್ಡದಾಗಿಸುವ ವ್ಯವಸ್ಥೆ ಇರುವುದರಿಂದ, ನೀರಿನ ಪ್ರವಾಹವನ್ನು ನಿಯಂತ್ರಿಸಬಹುದು.
ಕಾಲುವೆಯ (ಬದು) ಅಗಲ ಮತ್ತು ಆಳ: ಕೆಲವು ತರಕಾರಿ ಬೆಳೆಗಳಿಗೆ , ೧೫ರಿಂದ ೨೦ ಸೆಂ.ಮೀ. ಆಳದ ಕಾಲುವೆಗಳು ಸಾಕು. ಕಬ್ಬಿಗೆ ೨೫ ರಿಂದ ೩೦ ಸೆಂ.ಮೀ. ಆಳದ ಕಾಲುವೆಗಳು ಬೇಕಾಗುತ್ತವೆ. ನೀರಿನ ಹರಿವು ನಿಧಾನವಾಗಿರುವ ಮಣ್ಣಿನಲ್ಲಿ, ಹೆಚ್ಚು ಅಗಲವಾಗಿರುವ ಕಡಿಮೆ ಆಳದ ಕಾಲುವೆಗಳು ಪ್ರಶಸ್ತ. ಈ ಬಗೆಯ ಕಾಲುವೆಗಳಲ್ಲಿ ನೀರು ಕೆಳಗೆ ಇಂಗಿ ಹೋಗಲು ಹೆಚ್ಚು ಸ್ಥಳವು ದೊರೆತಂತಾಗುತ್ತದೆ. ನೀರು ವೇಗದಿಂದ ಒಳ ಪ್ರವೇಶಿಸಬಲ್ಲ ಮಣ್ಣಿನಲ್ಲಿ, ಕಾಲುವೆಗಳು ಉದ್ದವಾಗಿರುವಲ್ಲಿ, ಅವು ಕಿರಿದಾಗಿ ಮತ್ತು ಆಳವಾಗಿ ಇರಬೇಕು. ಇದರಿಂದ, ಬೋದುಗಳ ಮೇಲ್ಭಾಗದಲ್ಲಿ ಅವಶ್ಯಕತೆಗಿಂತ ಅಧಿಕ ನೀರು ಇಂಗುವುದನ್ನು ತಪ್ಪಿಸಬಹುದು.
ಗುಣಗಳು
ಅವಗುಣಗಳು
ಕಿರು ಅಂತರದ ಬೋದು ಕಾಲುವೆಗಳು (Corrugations): ಈ ಪದ್ಧತಿಗಳು ಬೋದು ಕಾಲುವೆ ಪದ್ಧತಿಯಂತೆಯೇ ಇವೆಯಾದರೂ ಅವುಗಳಲ್ಲಿ ಕೆಳಗಿನ ಭಿನ್ನತೆಗಳಿವೆ:
ಮುಖ್ಯ ಕಾಲುವೆಯಿಂದ ಹರಿದು ಬರುವ ನೀರಿನ ಪ್ರಮಾಣವು ಕಡಿಮೆ ಇದ್ದಾಗ ಮತ್ತು ನೀರು ಸುಲಭವಾಗಿ ಹರಿಯಲು ಭೂಮಿಯ ರಚನೆಯು ಅಷ್ಟು ಸಮಂಜಸವಿಲ್ಲದಿರುವಾಗ, ಕಿರು ಅಂತರದ ಬೋದು ಕಾಲುವೆಗಳು ಪ್ರಯೋಜನಕಾರಿ. ಕಡಮೆ ಅಂತರದ ಸಾಲುಗಳಿರುವ ಬೆಳೆಗಳಲ್ಲಿ ಈ ಪದ್ಧತಿಯನ್ನು ಅನುಕೂಲಕರವಾಗಿ ಬಳಸಬಹುದು.
ಬಿದಿರಿನ ತುಂಡಿನಿಂದ ಸಿದ್ಧಪಡಿಸಿದ ವಿಶಿಷ್ಟ ಉಪಕರಣದಿಂದ ಅಥವಾ ಬೇಸಾಯದ ಇತರ ಉಪಕರಣಗಳಿಂದ, ಕಿರು ಅಂತರದ ಬೋದು ಕಾಲುವೆಗಳನ್ನು ನಿರ್ಮಿಸಬಹುದು. ಕಾಲುವೆಗಳು V ಅಥವಾ U ಆಕಾರದಲ್ಲಿರಬಹುದು. ಕಾಲುವೆಗಳು ೬ರಿಂದ ೧೦ ಸೆಂ.ಮೀ. ಆಳವಿದ್ದರೆ ಸಾಕು. ಮಣ್ಣಿನ ಗುಣ ಧರ್ಮ ಮತ್ತು ಭೂಮಿಯ ರಚನೆ ಇವುಗಳ ಮೇಲಿಂದ ಎರಡು ಕಾಲುವೆಗಳ (ಬೋದುಗಳ) ಮಧ್ಯದ ಅಂತರವನ್ನು ನಿರ್ಧರಿಸಬಹುದು.
ಎರೆ ಮತ್ತು ಮರಳು ಮಣ್ಣುಗಳಿಗಿಂತ, ಗೋಡು ಮಣ್ಣಿನಲ್ಲಿ ಈ ಪದ್ಧತಿಯು ಹೆಚ್ಚು ಸೂಕ್ತವಾಗಿದೆ. ಲವಣಗಳಿರುವ ಮಣ್ಣಿನಲ್ಲಿ ಅಥವಾ ಲವಣಯುತ ಜಲವನ್ನು ನೀರಾವರಿಗೆ ಉಪಯೋಗಿಸಬೇಕಾದ ಪ್ರಸಂಗವಿದ್ದಾಗ ಈ ಪದ್ಧತಿಯನ್ನು ಅನುಸರಿಸಬಾರದು.
ವಿಶಾಲ ಬೋದು ಪದ್ಧತಿ (Broad Ridge Method): ಒಂದರಿಂದ ಎರಡು ಮೀ.ಗಳ ಅಂತರದ ಕಾಲುವೆಯನ್ನು ನಿರ್ಮಿಸಿ, ಹೊರ ಬಂದ ಮಣ್ಣನ್ನು ಎರಡು ಕಾಲುವೆಗಳ ಮಧ್ಯದಲ್ಲಿರುವ ಸ್ಥಳದಲ್ಲಿ ಮಣ್ಣನ್ನು ಸಮನಾಗಿ ಹಾಕಿ, ವಿಶಾಲವಾದ ಬೋದುಗಳನ್ನು ಸಿದ್ಧಪಡಿಸಬೇಕು. ಬೆಳೆಯಲಿರುವ ಬೆಳೆಯ ಸ್ವಭಾವದ ಮೇಲಿಂದ ಎರಡು ಬೋದುಗಳ ಮಧ್ಯದ ಅಂತರವನ್ನು ನಿರ್ಧರಿಸಬೇಕು.
ಈ ಪದ್ಧತಿಯಲ್ಲಿ ಬೋದಿನ ಮೇಲೆ ನೇರವಾಗಿ ನೀರಿನ ಪೂರೈಕೆಯನ್ನು ಮಾಡುವುದಿಲ್ಲ. ಬೋದುಗಳ ಪಕ್ಕದಲ್ಲಿರುವ ಕಾಲುವೆಗಳಲ್ಲಿ ನೀರಿನ ಪೂರೈಕೆಯಾಗುತ್ತದೆ. ನೀರು ಒಳಗಿನಿಂದಲೇ ಬೋದಿನೊಳಗೆ ಹರಿದು ಹೋಗಿ, ಬೋದಿನಲ್ಲಿ ಬೆಳೆಯುತ್ತಿರುವ ಬೆಳೆಗೆ ದೊರೆಯುತ್ತದೆ.
ಸೂಕ್ತ ಬೆಳೆಗಳು
ಗುಣಗಳು
ಅವಗುಣಗಳು
ಪದ್ಧತಿಗಳ ಸಮ್ಮಿಳಿತ ಬಳಕೆ: ಕೆಲವು ಪ್ರಸಂಗಗಳಲ್ಲಿ, ಎರಡು ಪದ್ಧತಿಗಳನ್ನು ಸಂಯೋಜಿಸಿದರೆ ನೀರಾವರಿಯು ಹೆಚ್ಚುಫಲಕಾರಿಯೆನಿಸುತ್ತದೆ. ಕೆಳಗಿನ ಉದಾಹರಣೆಗಳನ್ನು ಗಮನಿಸಬಹುದು.
i. ಬದು ಪಟ್ಟಿಗಳಲ್ಲಿ ಕಿರು ಅಂತರದ ಬೋದು ಕಾಲುವೆಗಳು: ಬದು ಪಟ್ಟಿಯಲ್ಲಿ, ಇಳಿಜಾರಿನ ಪ್ರಮಾಣವು ಕಡಿಮೆ ಇದ್ದಾಗ, ನೀರಾವರಿಯ ಜಲವು ಇಚ್ಛಿತ ವೇಗದಿಂದ ಮುಂದೆ ಚಲಿಸದೆ ಇರಬಹುದು. ಇಂತಹ ಸಂದರ್ಭಗಳಲ್ಲಿ, ಕಿರು ಅಂತರದ ಬೋದು ಕಾಲುವೆಗಳನ್ನು ಬದು ಪಟ್ಟಿಯಲ್ಲಿ ನಿರ್ಮಿಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.
ii. ಬದು ಪಟ್ಟಿಗಳಲ್ಲಿ ಬೋದು ಕಾಲುವೆಗಳು: ಎರೆ ಪ್ರಮಾಣವು ಅಧಿಕವಿರುವ ಕಪ್ಪು ಮಣ್ಣಿನಲ್ಲಿ ತಯಾರಿಸಿದ ಬದು ಪಟ್ಟಿಗೆಗಳಲ್ಲಿ, ಬೋದು ಕಾಲುವೆಗಳನ್ನು ನಿರ್ಮಿಸುವುದು ಸೂಕ್ತ. ಇದರಿಂದ ಮಳೆಗಾಲದಲ್ಲಿ ಹೆಚ್ಚಾದ ನೀರನ್ನು, ಹೊರ ಹಾಕಲು ಈ ಕಾಲುವೆಗಳು ಸಹಾಯಕವಾಗುತ್ತದೆ.
iii. ಸಪಾಟು ಮಡಿಗಳಲ್ಲಿ ಏರು ಮಡಿಗಳು ಅಥವಾ ಬೋದು ಕಾಲುವೆಗಳುಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿ ಎನಿಸುತ್ತವೆ.
ಭೂಮಿಯ ಮೇಲ್ಭಾಗದಲ್ಲಿ ನೀರನ್ನು ಪೂರೈಸುವ ವಿಧಾನದ ವಿವಿಧ ಪದ್ಧತಿಗಳನ್ನು ನಿರ್ಮಿಸುವಾಗ ಲಕ್ಷ್ಯದಲ್ಲಿಡಬೇಕಾದ ಸಂಗತಿಗಳು: ನೀರಾವರಿಯ ಪದ್ಧತಿಗಳು, ಕೆಳಗೆ ಕೊಟ್ಟ ಸಂಗತಿಗಳಿಂದ ಎಷ್ಟು ಸನಿಹದಲ್ಲಿರುತ್ತವೆಯೋ ಅಷ್ಟು ಉತ್ತಮ ಪದ್ಧತಿಗಳು ಎಂದು ತಿಳಿಯಬೇಕು.
ಸೂಕ್ಷ್ಮ ನೀರಾವರಿ ಪದ್ಧತಿಗಳು (Mircro-irrigation) : ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಹಲವು ವಿಧಾನಗಳಿವೆಯಾದರೂ ಕೆಳಗಿನ ವಿಧಾನಗಳು ಪ್ರಮುಖವಾದವೆನ್ನಬಹುದು.
ಪ್ರತಿ ತಾಸಿಗೆ ಸಾಮಾನ್ಯವಾಗಿ ೨೬೦ ಲೀ. ಮೀರದಷ್ಟು ನೀರು ಹೊರ ಬರುವ ವ್ಯವಸ್ಥೆಯಿರುತ್ತದೆ. ನೀರು ಹೊರ ಬರುವ ಸಾಧನದ ರಂಧ್ರವು ದೊಡ್ಡದಾಗಿರುರುವುದರಿಂದ, ಕಸ ಕಡ್ಡಿಗಳಿಂದ ರಂಧ್ರವು ಕಟ್ಟಿಕೊಳ್ಳುವ ಸಾಧ್ಯತೆಯು ಕಡಿಮೆ.
ಮೇಲಿನ ಪದ್ಧತಿಗಳಲ್ಲದೇ ಸಂಚಾರಿ ಜಿನುಗು ನೀರಾವರಿ, ಕೊಳವೆಯ ಛಿದ್ರಗಳಿಂದ ಹೊರ ಚಿಮ್ಮುವ ನೀರಾವರಿ (Perforation) ಮುಂತಾದ ಇತರರ ಪದ್ಧತಿಗಳೂ ಅಲ್ಲಲ್ಲಿ ಕಂಡುಬರುತ್ತವೆ. ಇವೆಲ್ಲವುಗಳಲ್ಲಿ, ಹನಿ ನೀರಾವರಿ ಪದ್ಧತಿಯೇ ಹಲವೆಡೆ ಬಳಕೆಯಲ್ಲಿರುವುದರಿಂದ, ಈ ಪದ್ಧತಿಯ ಬಗ್ಗೆ ಹೆಚ್ಚಿನ ವಿವರಗಳು ಕೆಳಗಿನಂತಿವೆ.
ಅ) ಹನಿ ನೀರಾವರಿ ಪದ್ಧತಿಯ ಇತಿಹಾಸ
ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಹಸಿರು ಮನೆಯ ಸಸ್ಯಗಳಿಗೆ ಕೊಳವೆಯ ಮೂಲಕ ಸಣ್ಣ ಪ್ರಮಾಣದಲ್ಲಿ ನೀರನ್ನು ಪೂರೈಸಲು ಪ್ರಾರಂಭ ಮಾಡಿದಾಗಲೇ ಹನಿ ನೀರಾವರಿ ಪದ್ಧತಿಗೆ ಅಡಿಗಲ್ಲು ಇಟ್ಟಂತಾಯಿತೆನ್ನಬಹುದು. ಸಣ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುವ ಕೊಳೆವೆಯ ಪಕ್ಕದಲ್ಲಿರುವ ಸಸ್ಯದ ಬೆಳವಣಿಗೆಯು ಇತರ ಸಸ್ಯದ ಬೆಳವಣಿಗೆಗಳಿಗಿಂತ ಉತ್ತಮವಾಗಿರುವುದನ್ನು ಕಳೆದ ಶತಮಾನದ ೪೦ರ ದಶಕದಲ್ಲಿ ಕಂಡ ಇಸ್ರೇಲಿನ ಸಿಂಚಾಬ್ಲಾಸ್ ಎಂಬ ವಿಜ್ಞಾನಿ, ಪ್ರತಿ ಸಸ್ಯದ ಬುಡಕ್ಕೂ ನೀರು ಸಣ್ಣ ಪ್ರಮಾಣದಲ್ಲಿ ಬೀಳುವಂತೆ, ಕೊಳವೆಗಳ ಜಾಲವನ್ನೇ ನಿರ್ಮಿಸಿ ಹನಿ ನೀರಾವರಿ ಪದ್ಧತಿಯ ಜನಕವೆನಿಸಿಕೊಂಡನು.
ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುವುದರಿಂದ ಆಗುವ ನೀರಿನ ಗಣನೀಯ ಉಳಿತಾಯ ಮತ್ತು ಈ ಪದ್ಧತಿಯ ಇತರ ಹಲವು ಅನುಕೂಲತೆಗಳ ಕಾರಣ ಇದು ಜನಪ್ರಿಯವಾಗತೊಡಗಿತು. ವಿಶ್ವದ ಹಲವು ದೇಶಗಳಲ್ಲಿ ಹನಿ ನೀರಾವರಿಯು ಭರದಿಂದ ಪಸರಿಸಿತು. ಸುಮಾರು ಹತ್ತು ದಶಲಕ್ಷ ಹೆಕ್ಟೇರು ಪ್ರದೇಶದಲಲಿ ಹನಿ ನೀರಾವರಿ ಪದ್ಧತಿಯನ್ನು ೧೯೯೦ರ ವೇಳೆಗೆ ಅಳವಡಿಸಲಾಯಿತು.
ಭಾರತದಲ್ಲಿ ೧೯೭೦ರ ದಶಕದಲ್ಲಿ ಹನಿ ನೀರಾವರಿ ಪದ್ಧತಿಯು ಆರಂಭಗೊಂಡಿತಾದರೂ ಹಲವು ಕಾರಣಗಳಿಂದ ಇದು ಹೆಚ್ಚು ಪ್ರಗತಿಯನ್ನು ಕಾಣಲಿಲ್ಲ. ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳ ಪ್ರಯತ್ನದ ಫಲವಾಗಿ, ಈ ಪದ್ಧತಿಗೆ ಬೇಕಾಗುವ ಸಲಕರಣೆಗಳನ್ನು ಹಲವು ಕಂಪನಿಗಳು ತಯಾರು ಮಾಡಿ ಒದಗಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಟ್ಟ ಸಹಾಯ ಧನ ಮತ್ತು ಬ್ಯಾಂಕುಗಳು ಈ ಕಾರ್ಯಕ್ಕೆ ಆದ್ಯತೆಯ ಮೇಲೆ ಸಾಲವನ್ನು ನೀಡಿದ್ದರಿಂದ ೧೯೯೦ರ ನಂತರ ಹನಿ ನೀರಾವರಿಯು ನಮ್ಮ ದೇಶದಲ್ಲಿ ಜನಪ್ರಿಯಗೊಂಡಿತು.
ಆ) ಹನಿ ನೀರಾವರಿ ಪದ್ಧತಿಯಿಂದಾಗುವ ಪ್ರಯೋಜನಗಳು
i. ನೀರಿನ ಉಳಿತಾಯ : ಹನಿ ನೀರಾವರಿ ಪದ್ಧತಿಯಿಂದ ಬೆಳೆಗೆ ಪೂರೈಸುವ ನೀರಿನಲ್ಲಿ, ಬಹಳಷ್ಟು ಉಳಿತಾಯವಾಗುತ್ತದೆಂಬುದು ಪ್ರಪ್ರಥಮ ಪ್ರಯೋಜನವೆನ್ನಬಹುದು. ಸಾಂಪ್ರದಾಯಕ ನೀರಾವರಿ ಪದ್ಧತಿಗೆ ಹೋಲಿಸಿದರೆ, ಈ ಪದ್ಧತಿಯಲ್ಲಿ ಶೇಕಡ ೪೦-೮೦ ರಷ್ಟು ನೀರಿನ ಉಳಿತಾಯವಾಗುತ್ತದೆ. ನೀರಿನ ಮಿತವ್ಯಯಕ್ಕೆ ಕಾರಣಗಳು ಕೆಳಗಿನಂತಿವೆ:
ii. ಬೆಳೆಗಳ ಅಧಿಕ ಇಳುವರಿ ಮತ್ತು ಉತ್ಪತ್ತಿಯ ಉತ್ತಮ ಗುಣಮಟ್ಟ : ಹನಿ ನೀರಾವರಿ ಪದ್ಧತಿಯಲ್ಲಿ ಅಡಕವಾಗಿರುವ ಕೆಲವು ವೈಶಿಷ್ಟ್ಯಗಳ ಕಾರಣದಿಂದ ಬೆಳೆಗಳ ಇಳುವರಿಯು ಅಧಿಕಗೊಳ್ಳುತ್ತದೆ. ಈ ಸಂದರ್ಭದಲ್ಲಿ ಮುಂದೆ ತಿಳಿಸಿದ ಸಂಗತಿಗಳನ್ನು ಗಮನಿಸಬಹುದು.
iii. ನೀರಿನ ಸಮರ್ಥ ಬಳಕೆ: ಮೇಲೆ ವಿವರಿಸಿದಂತೆ, ಕಡಿಮೆ ಪ್ರಮಾಣದ ನೀರನ್ನು ಬಳಸಿ, ಅಧಿಕ ಉತ್ಪಾದನೆಯನ್ನು ಪಡೆಯಲು ಈ ಪದ್ಧತಿಯಿಂದ ಸಾಧ್ಯವಾಗುವುದರಿಂದ ಪ್ರತಿ ಲೀ. ನೀರಿಗೆ ಹೆಚ್ಚಿನ ಉತ್ಪಾದನೆಯು ದೊರೆತಂತಾಗುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಹನಿ ನೀರಾವರಿಯಿಂದ, ನೀರಿನ ಬಳಕೆಯ ಸಾಮರ್ಥ್ಯವು ಅಧಿಕಗೊಳ್ಳುತ್ತದೆ.
iv. ಕಳೆಯ ಉಪದ್ರವ ಕಡಮೆ: ಹನಿ ನೀರಾವರಿ ಪದ್ಧತಿಯಲ್ಲಿ, ನೀರನ್ನು ಸೋಸಬೇಕಾಗುತ್ತದೆ. ಆದ್ದರಿಂದ, ಕಳೆಗಳ ಬೀಜಗಳು, ನೀರಿನ ಮುಖಾಂತರ, ಬೆಳೆಯ ಪ್ರದೇಶವನ್ನು ಪ್ರವೇಶಿಸಲು ತಡೆಯುಂಟಾಗುತ್ತದೆ. ಅಲ್ಲದೇ, ಸೋಸಿದ ನೀರನ್ನು ಕೊಳವೆಯ ಮೂಲಕ ಒಯ್ದು, ಬೆಳೆಗಳಿಗೆ ಪೂರೈಸಲಾಗುತ್ತದೆಯಾದ್ದರಿಂದ, ನೀರಿನೊಡನೆ ಕಳೆಗಳ ಬೀಜಗಳು ಹರಡುವ ಸಾಧ್ಯತೆ ಇಲ್ಲ.
ಹನಿ ನೀರಾವರಿಯಿಂದ, ಭೂಮಿಯ ಸ್ವಲ್ಪ ಭಾಗ ಮಾತ್ರ ತೇವವಾಗುವುದರಿಂದ, ಮಳೆಗಾಲವನ್ನು ಬಿಟ್ಟು ಇತರ ಹಂಗಾಮುಗಳಲ್ಲಿ ಕಳೆಗಳ ತೊಂದರೆಯೂ ಅತಿ ಕಡಿಮೆ ಎನ್ನಬಹುದು. ಹನಿ ನೀರಾವರಿಯಿಂದ ನೆನೆಯುವ ಅಲ್ಪ ಪ್ರದೇಶವೂ ಹೆಚ್ಚಾಗಿ ಗಿಡ ಮರಗಳ ನೆರಳಿನಲ್ಲಿ ಇರುವುದರಿಂದ, ಈ ಪ್ರದೇಶವು ಕಳೆಗಳ ಬೆಳವಣಿಗೆಗೆ ಅಷ್ಟು ಅನುಕೂಲಕರವಿಲ್ಲ. ಹೀಗಾಗಿ, ಕಳೆಗಳು ಬೆಳೆಯಬಹುದಾದ ಪ್ರದೇಶವು ಅತಿ ಕಡಮೆ ಉಳಿಯುವುದರಿಂದ ಸ್ವಲ್ಪ ಖರ್ಚಿನಲ್ಲಿ ಕಳೆಗಳನ್ನು ಕಿತ್ತಾಗಲಿ, ಕಳೆ ನಾಶಕಗಳ ಬಳಕೆಯಿಂದಾಗಲಿ ಕಳೆಗಳನ್ನು ನಿಯಂತ್ರಣದಲ್ಲಿಡಬಹುದು.
v. ಶ್ರಮದ ಮತ್ತು ಖರ್ಚಿನ ಉಳಿತಾಯ
vi. ಎಲ್ಲ ಬಗೆಯ ಭೂಮಿಗೂ ಸೂಕ್ತ
vii. ಸಮಯದ ಬಂಧನವಿಲ್ಲ : ಸಾಂಪ್ರದಾಯಕ ಪದ್ಧತಿಯಲ್ಲಿ, ನೀರನ್ನು ನಿಯಂತ್ರಿಸಲು, ಆಳುಗಳು ಸದಾ ಕಾರ್ಯನಿರತರಾಗಿರಬೇಕಾಗುತ್ತದೆ. ಗಾಳಿಯು ವೇಗದಿಂದ ಬೀಸುತ್ತಿರುವಾಗ ಸೇಚನ ನೀರಾವರಿಯನ್ನು ಕಾರ್ಯಗತ ಮಾಡಿದರೆ, ನೀರಿನ ಪೂರೈಕೆಯು ಸಮಾಧಾನಕರವಾಗಿ ಆಗುವುದಿಲ್ಲ. ಆದರೆ, ಹನಿ ನೀರಾವರಿಗೆ ಈ ಬಗೆಯ ಇತಿ ಮಿತಿಗಳು ಇರುವುದಿಲ್ಲವಾದ್ದರಿಂದ, ಯಾವ ಸಮಯದಲ್ಲಾದರೂ (ರಾತ್ರಿಯ ಸಮಯದಲ್ಲಿ ಸಹ) ಸಮರ್ಥವಾಗಿ ನೀರನ್ನು ಬೆಳೆಗೆ ಪೂರೈಸಬಹುದು.
viii. ಲವಣಯುಕ್ತ ನೀರಿನ ಬಳಕೆ : ನೀರಾವರಿಗೆ ಲವಣಯುಕ್ತ ನೀರನ್ನು ಬಳಸಲೇಬೇಕಾದ ಪ್ರಸಂಗವು ಬಂದಾಗ, ಉಳಿದ ಪದ್ಧತಿಗಳಿಗಿಂತ, ಹನಿ ನೀರಾವರಿ ಪದ್ಧತಿಯೇ ಹೆಚ್ಚು ಸೂಕ್ತ. ಮಣ್ಣಿನ ಒಂದು ಬಿಂದುವಿನಿಂದ ಬೀಳುತ್ತಿರುವ ನೀರಿನ ಹನಿಗಳು, ಮಣ್ಣನ್ನು ಒದ್ದೆ ಮಾಡುತ್ತಾ ವರ್ತುಲಾಕಾರದಲ್ಲಿ ಆರ್ದ್ರತೆಯು ಹೊರಭಾಗಕ್ಕೆ ಸಾಗುತ್ತದೆ. ಆ ನೀರಿನೊಡನೆ ಇರುವ ಲವಣಗಳೂ ಹೊರ ವಲಯಗಳಿಗೆ ಸಾಗುತ್ತವೆ. ನೀರಿನ ಪೂರೈಕೆ ಸ್ಥಗಿತಗೊಂಡ ನಂತರ, ಬಹು ಪಾಲು ಲವಣಗಳು ಹೊರ ಪರಧಿಯಲ್ಲಿಯೇ ಉಳಿದುಕೊಳ್ಳುತ್ತವೆ. ಹೀಗಾಗಿ ಒಳಸುತ್ತಿನಲ್ಲಿರುವ ಆರ್ದ್ರತೆಯಲ್ಲಿ ಲವಣಗಳ ಅಂಶವು ಅತಿ ಕಡಿಮೆ. ನೀರನ್ನು ಹೊರಬಿಡುವ ಸಾಮರ್ಥ್ಯವನ್ನು ಮತ್ತು ಹೊರ ಹೊಮ್ಮುವ ನೀರಿನ ಪ್ರಮಾಣವನ್ನು ಎಚ್ಚರಿಕೆಯಿಂದ ಹೊಂದಾಣಿಕೆ ಮಾಡಿಕೊಂಡರೆ, ಬೆಳೆಗೆ ಆಗಬಹುದಾದ ಲವಣದ ದುಷ್ಪರಿಣಾಮವನ್ನು ಬಹುಮಟ್ಟಿಗೆ ಕಡಮೆ ಮಾಡಬಹುದು.
ಇ) ಹನಿ ನೀರಾವರಿಯ ಅವಗುಣಗಳು
i. ಪ್ರಾರಂಭಿಕ ಖರ್ಚು: ನೀರಾವರಿಯ ಇತರ ಪದ್ಧತಿಗಳಿಗೆ ಹೋಲಿಸಿದರೆ, ಹನಿ ನೀರಾವರಿಯನ್ನು ಆರಂಭಿಸಲು ಅಧಿಕ ಹಣವು ಬೇಕಾಗುತ್ತದೆ. ಆದರೆ, ಈ ಪದ್ಧತಿಯಿಂದ ದೊರೆಯುವ ಲಾಭ, ಅನುಕೂಲತೆಗಳು, ಸರಕಾರದಿಂದ ದೊರೆಯುವ ಅನುದಾನದ ಹಣ, ಬ್ಯಾಂಕುಗಳಿಂದ ಆಧ್ಯತೆಯ ಮೇಲೆ ಸುಲಭ ಕಂತುಗಳಲ್ಲಿ ಸಿಗುವ ಸಾಲದ ಹಣ ಇತ್ಯಾದಿಗಳನ್ನು ಪರಿಗಣಿಸಿದಾಗ ಈ ಪದ್ಧತಿಯು ಸೂಕ್ತ ಎನ್ನಬಹುದು.
ii. ಕಲ್ಮಷದಿಂದಾಗುವ ತೊಂದರೆಗಳು : ನೀರಾವರಿಯ ಜಲದಲ್ಲಿರುವ ಕಸ ಕಡ್ಡಿ, ರೇವೆ ಇತ್ಯಾದಿ ವಸ್ತುಗಳು ಮತ್ತು ನೀರಿನಲ್ಲಿ ಬೆಳೆಯುವ ಪಾಚಿಗಳು ಕೊಳವೆಗಳಲ್ಲಿ ನೀರು ಹೊರ ಬರುವ ಸಾಧನಗಳಲ್ಲಿ ಸಂಗ್ರಹಗೊಂಡು, ಹೊರ ಬರುವ ನೀರಿಗೆ ತಡೆಯನ್ನುಂಟು ಮಾಡುತ್ತವೆ. ಹನಿ ನೀರಾವರಿ ವ್ಯವಸ್ಥೆಯ ವಿವಿಧ ಭಾಗಗಳನ್ನು ಆಗಾಗ ಸ್ವಚ್ಛಗೊಳಿಸಿ ತೊಂದರೆಯನ್ನು ನಿವಾರಿಸಬಹುದು.
iii. ನೀರಿನ ಕೊಳವೆಗಳಿಗೆ ಆಗಬಹುದಾದ ಹಾನಿ : ನೀರನ್ನು ಹರಿಸುವ ಕೊಳವೆಗಳನ್ನು ಇಲಿ, ಹೆಗ್ಗಣಗಳು ಕಡಿದು ಹಾನಿಯನ್ನುಂಟು ಮಾಡಬಹುದು. ಬೇಸಾಯದ ಉಪಕರಣಗಳಿಂದ ಮತ್ತು ಆಳುಗಳಿಂದ ಕೊಳವೆಗಳಿಗೆ ಹಾನಿಯು ತಟ್ಟಬಹುದು. ಸಾಧ್ಯವಿದ್ದಲ್ಲಿ ಕೊಳವೆಗಳನ್ನು, ಭೂಮಿಯೊಳಗೆ ಅವಶ್ಯವಿರುವಷ್ಟು ಆಳದಲ್ಲಿ ಹೂತು ಮತ್ತು ಕೆಲವು ಮುನ್ನೆಚ್ಚರಿಕೆಗಳಿಂದ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
iv. ಅಧಿಕ ಆಳಕ್ಕೆ ಹೋಗದ ಬೇರುಗಳು : ಬೆಳೆಗೆ ಪೂರೈಕೆಯಾಗುವ ನೀರಿನ ಪ್ರಮಾಣವು ತುಲನಾತ್ಮಕವಾಗಿ ಕಡಿಮೆ ಇರುತ್ತದೆಯಾದ್ದರಿಂದ, ನೀರು ಹೆಚ್ಚು ಆಳಕ್ಕೆ ಇಳಿದು ಹೋಗುವುದಿಲ್ಲ. ಮತ್ತು ಹೆಚ್ಚು ಸ್ಥಳಕ್ಕೆ ಪಸರಿಸುವುದಿಲ್ಲ. ಆರ್ದ್ರತೆಯಿರುವಲ್ಲಿಯೇ ಬೇರುಗಳು ಪಸರಿಸುತ್ತವೆಯಾದ್ದರಿಂದ ಗಿಡದ ಬೇರುಗಳು ಹೆಚ್ಚು ಆಳಕ್ಕೆ ಹೋಗಿರುವುದಿಲ್ಲ. ಇದರಿಂದ, ಕೆಳಗಿನ ಅನಾನುಕೂಲಗಳಿವೆ.