ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಇರುವ ಸಂಸ್ಥೆ. ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಅದರ ಪ್ರಾಥಮಿಕ ಉದ್ದೇಶವಾಗಿದೆ. ಆದರೆ, ಈ ಸಂಸ್ಥೆಯು ವಿಜ್ಞಾನ ಹಾಗೂ ವೈದ್ಯಕೀಯ ಸಾಹಿತ್ಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಭಾವನೆ ಕೆಲವು ವೈದ್ಯರಲ್ಲಿದೆ. ಕೆಲವು ಕನ್ನಡ ಸಾಹಿತಿಗಳಂತೂ, ವೈದ್ಯಸಾಹಿತ್ಯವನ್ನು ಪರಿಷತ್ತು ಅಸ್ತಿತ್ವಕ್ಕೆ ಬರಬೇಕಾಯಿತು. ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಅವುಗಳಲ್ಲಿ ಕನ್ನಡ ವೈದ್ಯ ಪುಸ್ತಕ ಪ್ರಕಟಣೆಯೂ ಒಂದು.
ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಹಲವು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದೆ. ಈ ಪುಸ್ತಕಗಳಿಗೆ ಅತ್ಯಂತ ಕಡಿಮೆ ಬೆಲೆಯನ್ನು ಇಟ್ಟಿತು. ಅವೆಲ್ಲವು ಮಾರಾಟವಾದವು. ಆನಂತರ ನಾನಾಕಾರಣಗಳಿಂದ ಪುಸ್ತಕ ಪ್ರಕಟಣೆಯು ನಿಂತಿತು. ಪರಿಷತ್ತು ಈಗ ಆ ಕೆಲಸವನ್ನು ಮತ್ತೆ ಆರಂಭಿಸಿದೆ. ಈ ಕೆಲಸ ಇನ್ನು ಮುಂದೆ ನಿರಂತರವಾಗಿ ಮುಂದುವರೆಯಲಿ ಎಂದುನಾವು ಆಶಿಸೋಣ.
ಕರ್ನಾಟಕದಲ್ಲಿ ಇಂದು ಸುಮಾರು ೧ ಲಕ್ಷದಷ್ಟು ಆಧುನಿಕ ವೈದ್ಯ ಪದವೀಧರರು ಇದ್ದರೂ, ಇವರಲ್ಲಿ ವೈದ್ಯ ಸಾಹಿತ್ಯ ರಚಿಸುತ್ತಿರುವವರ ಸಂಖ್ಯೆ ತೀರಾ ಗೌಣ. ೫೦ ಜನರಿಗಿಂತ ಹೆಚ್ಚಿಲ್ಲ. ಇವರಲ್ಲಿಯೂ ವೈದ್ಯಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿ ಬರೆಯುತ್ತಿರುವವರ ಪ್ರಮಾಣ ಕೇವಲ ಬೆರಳೆಣಿಕೆಯಷ್ಟು ಎಲ್ಲೋ ಒಂದು ಕಡೆ ಇವರಿಗೆ ವೈದ್ಯಲೇಖನ ರಚನೆಯ ಸ್ಪೂರ್ತಿ ತುಂಬುವ ಕೆಲಸವನ್ನು ಪರಿಷತ್ತು ಮಾಡಬೇಕಿದೆ. ಹಾಗಾಗಿ ಇಂದು ಕನ್ನಡದಲ್ಲಿ ವೈದ್ಯಲೇಖನ ಬರೆಯುತ್ತಿರುವ ಎಲ್ಲ ವೈದ್ಯರ ಒಂದು ಪ್ರಾತಿನಿಧಿಕ ಲೇಖನವನ್ನು ಒಳಗೊಂಡ ಒಂದು ಸಂಪುಟವನ್ನು ತರುವುದು ಸೂಕ್ತ ಎಂದು ಪರಿಷತ್ತು ಭಾವಿಸಿತು. ಹಾಗಾಗಿ ಕರ್ನಾಟಕದ ಎಲ್ಲ ಹಿರಿಯ-ಕಿರಿಯ ಲೇಖಕರಿಗೆ ಒಂದು ಲೇಖನವನ್ನು ಬರೆದು ಕೊಡಲು ಪ್ರಾರ್ಥಿಸಿತು. ಕೆಲವರು ಈ ಸಂಕಲನಕ್ಕಾಗಿ ಹೊಸ ಲೇಖನವನ್ನು ಬರೆದುಕೊಟ್ಟರು. ಉಳಿದವರು ಈ ಹಿಂದೆ ಪ್ರಕಟವಾದ ಲೇಖನಗಳಲ್ಲಿ ಉತ್ತಮವಾದ ಒಂದು ಲೇಖನವನ್ನು ಆಯ್ದು ಕಳುಹಿಸಿಕೊಟ್ಟರು.
ಪರಿಷತ್ತು ಹೊಸ ವೈದ್ಯ ಲೇಖಕರನ್ನು ಆಕರ್ಷಿಸುವ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಲೇಖನ ಬರೆಯಲು ಅವರಲ್ಲಿ ಸ್ಪೂರ್ತಿ ತುಂಬುವುದೂ ಒಂದಾಗಿದೆ. ಹಾಗಾಗಿ ಈಗಾಗಲೇ ಲೇಖನ ಬರೆಯುತ್ತಿರುವ ವೈದ್ಯರನ್ನು ಸಂಪರ್ಕಿಸಿದೆವು. ‘ವೈದ್ಯ ಲೇಖಕನಾಗಿ ನನ್ನ ಅನುಭವ’ ಎಂಬ ವಿಯದ ಬಗ್ಗೆ ಒಂದು ಪುಟದ ಅನುಭವವನ್ನು ಬರೆಯುವಂತೆ ಸೂಚಿಸಿದೆವು. ಪರಿಷತ್ತಿನ ಈ ಎರಡು ಬೇಡಿಕೆಗಳಿಗೆ ನಮ್ಮ ವೈದ್ಯ ಲೇಖಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿತು. ಅದು ನಮ್ಮ ನಿರೀಕ್ಷೆಯನ್ನು ಮೀರಿತು.
ಮೊದಲು ನಮ್ಮ ವೈದ್ಯಲೇಖಕರ ಹೆಸರನ್ನು ಇಂಗ್ಲಿಷ್ ವರ್ಣಮಾಲಾದಿಯಾಗಿ ಜೋಡಿಸಿದೆವು. ನಂತರ ಅದರ ಪಕ್ಕದಲ್ಲಿ ಅವರು ಬರೆದ ಲೇಖನಗಳ ಶೀರ್ಷಿಕೆಗಳನ್ನು ಬರೆದವು. ಅದರ ಪಕ್ಕದಲ್ಲಿ ಪುಟ ಸಂಖ್ಯೆಯನ್ನು ಬರೆದೆವು. ಪುಟಸಂಖ್ಯೆಯನ್ನು ಕೂಡಿಸಿದರೆ ಅದು ಸುಮಾರು ೪೫೦ ಪುಟಗಳನ್ನು ಮೀರಿತು. ಆಗ ಪರಿಷತ್ತಿನ ಪದಾಧಿಕಾರಿಗಳು ಚರ್ಚಿಸಿದೆವು. ೪೫೦ ಪುಟಗಳ ಬೃಹತ್ ಹೊತ್ತಿಗೆಯನ್ನು, ಲಾಭದ ಆಮಿಷವಿಲ್ಲದೆ ಮುದ್ರಿಸಬೇಕಾದರೆ, ಅದಕ್ಕೆ ಕನಿಷ್ಟ ರೂ. ೨೦೦ರಷ್ಟಾದರೂ ಮುಖಬೆಲೆ ಇಡಬೇಕಾಗುತ್ತದೆ. ಇದು ಶ್ರೀಸಾಮಾನ್ಯನ ಜೇಬಿಗೆ ತುಸು ದುಬಾರಿ ಎಂದು ನಮ್ಮಲ್ಲಿ ಕೆಲವರು ಹಿತವಚನವನ್ನು ಹೇಳಿದರು. ಹಾಗಾಗಿ ಈ ಎಲ್ಲ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸುವುದು ಸೂಕ್ತ ಎಂದು ತೀರ್ಮಾನಿಸಿದೆವು.
ಮೊದಲ ಸಂಪುಟಕ್ಕೆ ಲೇಖನಗಳನ್ನು ಜೋಡಿಸುವ ಕೆಲಸವನ್ನು ಆರಂಭಿಸಿದೆವು. ಆಗ ನಮ್ಮ ಮನಸ್ಸಿಗೆ ಕೆಲವು ಹೊಸ ವಿಚಾರಗಳು ಬಂದವು.
ಪರಿಷತ್ತು ‘ವೈದ್ಯಸಾಹಿತ್ಯ-ಸಮೃದ್ಧ ಆರೋಗ್ಯ ಗ್ರಂಥ ಸಂಪಾದನೆಯನ್ನು ಮಾಡಲು ನಾನು ಅರ್ಹ ಎಂದು ಭಾವಿಸಿ, ಈ ಗುರುತರ ಕೆಲಸವನ್ನು ನನಗೆ ವಹಿಸಿದೆ. ಪರಿಷತ್ತಿಗೆ ನಾನು ಕೃತಜ್ಞ. ಈ ಗ್ರಂಥ ಸಂಪಾದನೆ ನನ್ನೊಬ್ಬನ ಸಾಧನೆ ಎಂಬ ಹಮ್ಮು ನನಗಿಲ್ಲ. ಈ ಪುಸ್ತಕ ನಿಮ್ಮ ಕೈಯಲ್ಲಿ ಇರಲು ಅನೇಕ ಮಹನೀಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿ. ಈ ಪುಸ್ತಕದ ಮುದ್ರಣ ಕಾರ್ಯವನ್ನು ಉಚಿತವಾಗಿ ಮಾಡಿಕೊಡುತ್ತಿರುವ ನವಕರ್ನಾಟಕದ ಶ್ರೀ ಆರ್.ಎಸ್. ರಾಜಾರಾಂ, ಶ್ರೀ ಉಡುಪ, ಶ್ರೀ ಸ್ವಾಮಿ ಅವರಿಗೆ ಪರಿಷತ್ತು ಹಾಗೂ ನಾನು ಕೃತಜ್ಞತೆಯನ್ನು ಸೂಚಿಸುತ್ತಿದ್ದೇವೆ. ಈ ಗ್ರಂಥಕ್ಕೆ ಹೆಸರು ಕೊಟ್ಟು ಸಂಕಲದ ವಿವಿಧ ಹಂತಗಳಲ್ಲಿ ಡಾ| ಸಿ.ಆರ್.ಚಂದ್ರಶೇಖರ್ ಅವರು ಸಲಹೆಗಳನ್ನು ನೀಡಿದ್ದಾರೆ. ಪರಿಷತ್ತಿನ ಪದಾಧಿಕಾರಿಗಳಾದ ಡಾ. ವಸುಂಧರಾ ಭೂಪತಿ, ಡಾ| ಪ್ರಕಾಶ್ ಸಿ ರಾವ್, ಶ್ರೀ ಎನ್. ವಿಶ್ವರೂಪಾಚಾರ್, ಡಾ.ಎನ್. ಗೋಪಾಲಕೃಷ್ಣ, ಶ್ರಿ ಆರ್. ಬಾಲಕೃಷ್ಣ ಮುಂತಾದವರು ಎಲ್ಲ ರೀತಿಯಿಂದ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆಯನ್ನು ಸೂಚಿಸುತ್ತಿದ್ದೇನೆ.
ಪರಿಷತ್ತು ಈ ಪುಸ್ತಕವನ್ನು ಲಾಭ-ನಷ್ಟಗಳಿಲ್ಲದೆ ಪ್ರಕಟಿಸುತ್ತಿದೆ. ಹಾಗಾಗಿ ಈ ಪುಸ್ತಕವನ್ನು ಕೊಂಡು ಓದುತ್ತಿರುವ ನಿಮಗೆ ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
ಡಾ| ನಾ. ಸೋಮೇಶ್ವರ
nasomeswar@gmail.com
ಬೆಂಗಳೂರು
೨೩ ನವೆಂಬರ್ ೨೦೦೮.
* * *